

ಬೀದರ್: ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ ಸ್ಥಾಪನೆ ಸ್ಥಳ ಮತ್ತು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ(ಬಿಎಸ್ಸೆಸ್ಕೆ) ಪುನಶ್ಚೇತನ ವಿಷಯದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು ಸ್ವಪ್ರತಿಷ್ಠೆಗೆ ಬಿದ್ದು ಅಭಿವೃದ್ಧಿಗೆ ಪೆಟ್ಟು ಕೊಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ದೂರಿದ್ದಾರೆ.
ಕೊಳಾರ್ ಹತ್ತಿರದ ರೇಷ್ಮೆ ಇಲಾಖೆಗೆ ಸೇರಿದ 82 ಎಕರೆ ಜಮೀನಿನಲ್ಲಿ 49.23 ಎಕರೆ ಜಾಗ ತೋಟಗಾರಿಕೆ ಮಹಾವಿದ್ಯಾಲಯಕ್ಕಾಗಿ ಈಗಾಗಲೇ ಹಸ್ತಾಂತರ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೂ ಬಿಜೆಪಿ ನಾಯಕರು ಸ್ವಪ್ರತಿಷ್ಠೆಗೆ ಬಿದ್ದು ಈ ಜಾಗದಲ್ಲೇ ಸಂಕೀರ್ಣ ನಿರ್ಮಿಸುತ್ತೇವೆ ಎಂದು ಹೇಳಿಕೆ ನೀಡಿ ತಮ್ಮ ಬುದ್ಧಿಮಟ್ಟ ಹೇಗಿದೆ ಎಂಬುದು ಪ್ರದರ್ಶಿಶಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.
ರೇಷ್ಮೆ ಇಲಾಖೆ ಜಾಗ ತೋಟಗಾರಿಕೆ ಮಹಾವಿದ್ಯಾಲಯಕ್ಕೆ ನೀಡಿದ್ದರಿಂದ ಜಿಲ್ಲೆಯಲ್ಲಿ ಈ ಕಾಲೇಜು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಜಾಗ ಸಿಗದಿದ್ದರೆ ಈ ಕಾಲೇಜು ಮಾನ್ಯತೆ ರದ್ದಾಗುತ್ತಿತ್ತು. ಬಿಜೆಪಿ ನಾಯಕರು ಹೇಳಿದಂತೆ ತೋಟಗಾರಿಕೆ ಕಾಲೇಜಿನ ಸ್ಥಳದಲ್ಲಿ ಸಂಕೀರ್ಣ ಮಾಡಿದರೆ ಜಮೀನಿಲ್ಲದ ಕಾರಣ ಮಾನ್ಯತೆ ರದ್ದಾಗುತ್ತದೆ. ಇದಕ್ಕೆ ಜಿಲ್ಲೆ ಬಿಜೆಪಿ ನಾಯಕರೇ ಹೊಣೆಯಾಗುತ್ತಾರೆ. ಇನ್ನಾದರೂ ಬಡಾಯಿ ಕೊಚ್ಚುಕೊಳ್ಳುವುದು ಬಿಟ್ಟು ವಾಸ್ತವ ತಿಳಿದು ಹೇಳಿಕೆ ನೀಡಲಿ ಎಂದು ಹೇಳಿದ್ದಾರೆ.
ಜಿಲ್ಲೆಯ ರೈತರ ಜೀವನಾಡಿ ಬಿಎಸ್ಸೆಸ್ಕೆ ಆರ್ಥಿಕ ಸಂಕಷ್ಟದಿಂದ ಬಾಗಿಲು ಮುಚ್ಚಿದೆ. ಇದನ್ನು ಆರಂಭಿಸಲು ಉತ್ತೇಜನ ನೀಡುವ ಬದಲು ಖಾಸಗಿಯವರಿಗೆ ನೀಡುವ ಹುನ್ನಾರ ಬಿಜೆಪಿ ನಾಯಕರು ನಡೆಸಿದ್ದಾರೆ. ರು. 50 ಕೋಟಿ ಸರ್ಕಾರ ಅನುದಾನ ಕೊಟ್ಟರೆ ಕಾರ್ಖಾನೆ ಪುನಃಶ್ಚೇತನಗೊಂಡು ರೈತರಿಗೆ ಅನುಕೂಲವಾಗುತ್ತದೆ. ಆದರೆ ಕಾರ್ಖಾನೆ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕಾರ್ಖಾನೆಗೆ 200 ಕೋಟಿ ರೂ.ಕೊಟ್ಟರೂ ಆರಂಭ ಆಗುವುದಿಲ್ಲ ಎಂಬ ಭಾವನೆ ಮೂಡಿಸಿ ಖಾಸಗಿಯವರಿಗೆ ಗುತ್ತಿಗೆ ನೀಡುವ ಹಂತಕ್ಕೆ ಬಂದಿದ್ದಾರೆ. ಜಿಲ್ಲೆಯ ಅಭಿವೃದ್ಧಿಗಾಗಿ ಕೆಲಸ ಮಾಡುವ ಪ್ರವೃತ್ತಿ ಬಿಜೆಪಿ ನಾಯಕರು ಬೆಳೆಸಿಕೊಳ್ಳಬೇಕು. ಈಗಿನ ಧೋರಣೆ ಬದಲಾಗದಿದ್ದರೆ ಜಿಲ್ಲೆಗೆ ಮಾರಕವಾಗುವುದರಲ್ಲಿ ಅನುಮಾನವಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ಮಂಜೂರಾಗಿದ್ದ ಮೌಲಾನಾ ಆಜಾದ್ ನ್ಯಾಷನಲ್ ಉರ್ದು ವಿವಿ ಸ್ಯಾಟ್ಲೈಟ್ ಕ್ಯಾಂಪಸ್, ಹೆಲಿಕ್ಯಾಪ್ಟರ್ ಬಿಡಿ ಭಾಗಗಳ ಉತ್ಪನ್ನ ಘಟಕ, ಸಿಪೆಟ್ ಕೇಂದ್ರಕ್ಕೆ ಜಮೀನು ಒದಗಿಸದ ಕಾರಣ ಇವೆಲ್ಲ ಬೇರೆಡೆ ಸ್ಥಳಾಂತರವಾಗಿವೆ. ಈಗ ತೋಟಗಾರಿಕೆ ಕಾಲೇಜಿನ ಜಾಗ ಪಡೆದರೆ ಇದರ ಮಾನ್ಯತೆಯೂ ರದ್ದಾಗಲಿದೆ.| ಅರವಿಂದಕುಮಾರ ಅರಳಿ, ವಿಧಾನ ಪರಿಷತ್ ಸದಸ್ಯ