ಬೀದರ್ ಪ್ರಯಾಣಿಕನ ಹತ್ಯೆ

saiphoddin
Published on

ಬೀದರ್: ರೈಲ್ವೆ ಸುರಕ್ಷತಾ ಪಡೆ (ಆರ್.ಪಿಎಫ್)ಯ ಸಿಬ್ಬಂದಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿಯೇ ಗುಂಡಿಟ್ಟು ನಾಲ್ವರನ್ನು ಹತ್ಯೆ ಮಾಡಿದ್ದರಲ್ಲಿ ಗಡಿ ಜಿಲ್ಲೆಯ ಬೀದರ್ ನ ಒಬ್ಬ ಪ್ರಯಾಣಿಕ ಇರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಹಮೀಲಾಪುರದ ನಿವಾಸಿ ಸೈಯದ್ ಸೈಫೊದ್ದೀನ್ ಮುನಿರೊದ್ದೀನ್ (38) ಗುಂಡಿಗೆ ಬಲಿಯಾದ ವ್ಯಕ್ತಿ. ಸೈಫೊದ್ದೀನ್ ಕಳೆದ ಹಲವು ವರ್ಷಗಳಿಂದ ಹೈದರಾಬಾದ್‌ ನ ರಿಂಗ್ ಕೋಟಿ ಪ್ರದೇಶದ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಅಂಗಡಿಯ ಮಾಲೀಕರ ಜತೆಗೆ ರಾಜಸ್ಥಾನದ ಅಜ್ಮೀರ್ ಹೋಗಿ ರೈಲಿನಲ್ಲಿ ಬರುವಾಗ ಈ ಘಟನೆ ಸಂಭವಿಸಿದೆ.
ಸೈಫೊದ್ದೀನ್ ಪತ್ನಿ ಹಾಗೂ ಮೂವರು ಪುತ್ರಿಯರು ಸ್ವಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಮೃತ ದೇಹ ಬುಧವಾರ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಜೈಪುರ-ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಆರ್.ಪಿಎಫ್ ನ ಕಾನ್ ಸ್ಟೇಬಲ್ ಚೇತನ್ ಸಿಂಗ್ ತನ್ನ ಬಳಿಯಿದ್ದ ಸ್ವಯಂಚಾಲಿತ ಬಂದೂಕಿನಿಂದ ಗುಂಡು ಹಾರಿಸಿ ತನ್ನ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ಮಾಡಿದ ನಂತರ ಮೂವರು ಪ್ರಯಾಣಿಕರನ್ನು ಗುಂಡು ಹಾರಿಸಿದ್ದಾನೆ. ಅದರಲ್ಲಿ ಸೈಫೊದ್ದೀನ್ ಸಹ ಒಬ್ಬರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net