

ಹುಮನಾಬಾದ್: ಮಾಜಿ ಸಚಿವ ದಿ.ಬಸವರಾಜ ಪಾಟೀಲ್ (ಗೌಡರು)ಸರಳ ವ್ಯಕ್ತಿತ್ವ, ಜಾತ್ಯತೀತ ಮನೋಭಾವನೆಯೊಂದಿಗೆ ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಜನಪರ, ಜೀವಪರ ಕಾಳಜಿಯುಳ್ಳವರಾಗಿದ್ದರು. ತಮ್ಮ ನಾಲ್ಕು ದಶಕದ ಸುದೀರ್ಘ ರಾಜಕೀಯ ಜೀವನದಲ್ಲಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕಾರ್ಯಗಳು ಜನಮಾನಸದಲ್ಲಿ ಸದಾ ಜೀವಂತವಾಗಿ ಉಳಿದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ದಿ.ಬಸವರಾಜ ಪಾಟೀಲ್ ಹುಮನಾಬಾದ್ ಅವರ ೭ನೇ ಪುಣ್ಯ ಸ್ಮರಣೋತ್ಸ ಉದ್ಘಾಟಿಸಿ ಮಾತನಾಡಿ, ಅವರೊಬ್ಬ ವ್ಯಕ್ತಿಯಾಗಿರದೆ ಶಕ್ತಿಯಾಗಿದ್ದರು.ನಮ್ಮ ಮಧ್ಯೆ ಅವರು ಭೌತಿಕವಾಗಿ ಇರದಿದ್ದರೂ ಅವರ ಮಾಡಿದ ನಾನಾ ಅಭಿವೃದ್ಧಿ ಕೆಲಸ ಚಿರಸ್ಥಾಯಿಯಾಗಿವೆ. ತಮ್ಮ ಪರಿವಾರಕ್ಕೆ ಜನಸೇವೆಯಲ್ಲಿ ಸಮರ್ಪಿಸಿ ಈ ಜಿಲ್ಲೆಗೆ ಕೊಡುಗೆ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಗೌಡರ ಮಾರ್ಗದರ್ಶನದಲ್ಲಿ ಪುತ್ರ ರಾಜಶೇಖರ ಪಾಟೀಲ್ ಹಾಗೂ ಅವರ ಕುಟುಂಬವು ಮುನ್ನಡೆದು ಜನರ ಸೇವೆ ಮಾಡುತ್ತಿದೆ. ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳಿಂದ ಸೋತರೂ ಕ್ಷೇತ್ರದ ವಿಕಾಸ, ಜನರ ಕೆಲಸದಲ್ಲಿ ತೊಡಗಿದ್ದಾರೆ. ನಮ್ಮ ಹಾಗೂ ಪಾಟೀಲ್ ಕುಟುಂಬ ಸದಾ ಜಿಲ್ಲೆಯ ಅಭಿವೃದ್ಧಿಗೆ ಒಂದಾಗಿ ದುಡಿಯುತ್ತಿದೆ ಎಂದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಿರೇಮಠದ ಶ್ರೀ ರೇಣುಕಾಗಂಗಾಧರ ಶಿವಾಚಾರ್ಯರು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿದರು. ಮಾಜಿ ಸಚಿವ ರಾಜಶೇಖರ ಪಾಟೀಲ್ ಅಧ್ಯಕ್ಷತೆ ವಹಿಸಿ ಪಾಲ್ಗೊಂಡ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲï ಪ್ರಾಸ್ತಾವಿಕ ಮಾತನಾಡಿ, ತಂದೆ ಮಾಡಿದ ಜನಪರ ಕಾಳಜಿ, ಸಾಮಾಜಿಕ ಕಾರ್ಯಗಳನ್ನು ವಿವರಿಸಿದರು.
ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಎಂಎಲïಸಿ ಭೀಮರಾವ ಪಾಟೀಲ್, ಮಾಜಿ ಎಂಎಲ್‌ಸಿಗಳಾದ ವಿಜಯಸಿಂಗ್ , ಕೆ.ಪುಂಡಲೀಕರಾವ, ಪ್ರಮುಖರಾದ ಬಸವರಾಜ ಬುಳ್ಳಾ, ವೀರಣ್ಣ ಪಾಟೀಲï, ಧನರಾಜ ತಾಳಂಪಳ್ಳಿ, ಗುರುನಾಥ ಕೊಳ್ಳುರ್, ಸಂತೋಷಕುಮಾರ ತಾಳಂಪಳ್ಳಿ, ರಾಚಪ್ಪ ಪಾಟೀಲï, ಆನಂದ ದೇವಪ್ಪ, ಲಕ್ಷ್ಮಣರಾವ ಬುಳ್ಳಾ, ರಮೇಶ ಡಾಕುಳಗಿ, ಕಂಟೆಪ್ಪ ದಾನಾ, ದತ್ತಕುಮಾರ ಚಿದ್ರಿ, ಬಾಬು ಟೈಗರ್, ಅಫ್ಸರಮಿಯಾ, ಓಂಕಾರ ತುಂಬಾ ಇತರರಿದ್ದರು. ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್ ವಂದಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು.
ಸಮಾಧಿ ಸ್ಥಳದಲ್ಲಿ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಜರುಗಿದವು. ಗಣ್ಯರು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ರಾಜ್ಯ ಮಟ್ಟದಲ್ಲಿ ಹುಮನಾಬಾದ್ ಹೆಸರಿಗೆ ಖ್ಯಾತಿ ತಂದುಕೊಟ್ಟು, ಎಲ್ಲರೂ ಗುರುತಿಸುವಂತೆ ಮಾಡಿರುವ ಶ್ರೇಯ ದಿ.ಬಸವರಾಜ ಪಾಟೀಲ್ï ಅವರಿಗೆ ಸಲ್ಲುತ್ತಿದೆ. ಸಮಾಜಕ್ಕೆ ಅವರು ಸಲ್ಲಿಸಿದ ಕೊಡುಗೆ ಅಪಾರ. ಅವರ ಆಶೀರ್ವಾದದಿಂದ ನಾನು ರಾಜಕೀಯಕ್ಕೆ ಬಂದು ಜನಸೇವೆ ಮಾಡುತ್ತಿರುವೆ. ಅಧಿಕಾರವಿರಲಿ, ಬಿಡಲಿ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಹಿತ ಕಾಯಲು ಬದ್ಧ.
|ರಾಜಶೇಖರ ಪಾಟೀಲ್ ಮಾಜಿ ಸಚಿವ