

ಭಾಲ್ಕಿ: ಬೀದರ್ ಜಿಲ್ಲೆಗೆ ಮಂಜೂರಾಗಿದ್ದ ಸೀಪೆಟ್ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋ ಕೆಮಿಕಲ್ಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ) ಕಾಲೇಜು ಸ್ಥಾಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ ಮಾಶೆಟ್ಟೆ ಆಗ್ರಹಿಸಿದ್ದಾರೆ.
ಬೀದರ್ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಹಾಗೂ ಯುವಕರಿಗೆ ಕೌಶಲ ಹೆಚ್ಚಿಸಲು ಅಂದಿನ ಕೇಂದ್ರ ಸಚಿವರಾದ ದಿವಂಗತ ಅನಂತಕುಮಾರ ಅವರು 2017ರಲ್ಲಿ ಭಾಲ್ಕಿಯಲ್ಲಿ ಜರುಗಿದ್ದ ಸಮಾರಂಭವೊಂದರಲ್ಲಿ ಜಿಲ್ಲೆಗೆ ಸೀಪೆಟ್ ಕಾಲೇಜು ಮಂಜೂರಿಯಾಗಿದೆ ಎಂದು ಘೋಷಿಸಿದ್ದರು. ಈ ಸಂಸ್ಥೆಗೆ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಜಿಲ್ಲೆಯಲ್ಲಿ ಸೀಪೆಟ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಸ್ತುತ ಸೀಪೆಟ್ ಸಂಸ್ಥೆ ಬೀದರ್ ಜಿಲ್ಲೆಯಿಂದ ಧಾರವಾಡಕ್ಕೆ ಸ್ಥಳಾಂತರ ಮಾಡಲಾಗಿದೆ ಎನ್ನುವ ಮಾತು ಕೇಳು ಬರುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ನಿರ್ಲಕ್ಷೃವೇ ಕಾರಣ ಎಂದು ಆರೋಪಿಸಿದ್ದಾರೆ.
ಸಂಸತ್ ಹಾಗೂ ವಿಧಾನಸಭೆ ಅಧಿವೇಶನ ಪ್ರಾರಂಭವಾಗಿದ್ದು, ಸೀಪೆಟ್ ಬೀದರ್ ಜಿಲ್ಲೆಯಿಂದ ಸ್ಥಳಾಂತರವಾಗುತ್ತಿರುವ ವಿಷಯದ ಬಗ್ಗೆ ಚರ್ಚಿಸಿ, ಜಿಲ್ಲೆಯಲ್ಲೇ ಸ್ಥಾಪಿಸುವಂತೆ ಒತ್ತಾಯಿಸಬೇಕು. ಸಂಸದರು, ಸಚಿವರು ಮೌನವಹಿಸದೇ ಪ್ರಶ್ನಿಸಿ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ಸೀಪೆಟ್ ಕಾಲೇಜು ಬೀದರ್ ನಿಂದ ಸ್ಥಳಾಂತರವಾದರೆ ಅದಕ್ಕೆ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ಕಾರಣರಾಗುತ್ತಾರೆ. ಜನರು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಪ್ರಯತ್ನ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ಸಂಸದರು, ಸಚಿವರ ಮನೆಗೆ ಘೇರಾವ್ ಹಾಕಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಶೆಟ್ಟೆ ಎಚ್ಚರಿಕೆ ನೀಡಿದ್ದಾರೆ.