ಬೀದರ್ ನಲ್ಲಿ ಬಂದ್ ಗಿಲ್ಲ ಬೆಂಬಲ

aiks
Published on

ಬೀದರ್: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ಶುಕ್ರವಾರ ಕರೆ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ಬೆಂಬಲ ಸಿಗಲಿಲ್ಲ. ಬಂದ್ಗೆ ಬೆಂಬಲಿಸಿ ಹೈವೇ ತಡೆ ಸಹ ನಡೆಯಲಿಲ್ಲ. ಕೆಲ ಸಂಘಟನೆಗಳಿಂದ ಮನವಿಪತ್ರ ಸಲ್ಲಿಕೆಗೆ ಮಾತ್ರ ಸೀಮಿತವಾಯಿತು.

ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್ ನಿಧನ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳು ಬಂದ್, ಪ್ರತಿಭಟನೆಯಿಂದ ದೂರ ಉಳಿದಿದ್ದವು. ಹೀಗಾಗಿ ಜಿಲ್ಲೆಯಲ್ಲಿ ಬಂದ್ ಕರೆಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

ನಗರದಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್) ಜಿಲ್ಲಾ ಸಮಿತಿಯಿಂದ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಲಾಯಿತು. ಕರೊನಾ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಬಂದಂತೆ ಸುಗ್ರೀವಾಜ್ಞೆ ಹೊರಡಿಸಿ ರೈತರಿಗೆ ಅನ್ಯಾಯ ಮಾಡಿವೆ ಎಂದು ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಹಕರ ಹಿತರಕ್ಷಣಾ ಕಾಯ್ದೆ ತಿದ್ದುಪಡಿ, ಬೆಳೆ ಭರವಸೆ ಮತ್ತು ಕೃಷಿ ಸೇವೆಗಳ (ರೈತರ ಸಶಕ್ತೀಕರಣ ಹಾಗೂ ರಕ್ಷಣೆ ಒಪ್ಪಂದ-2020) ಹಾಗೂ ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆಗಳನ್ನು ವಿರೋಧದ ನಡುವೆ ಜಾರಿಗೆ ತರಲಾಗಿದೆ. ಕೇಂದ್ರದ ಹಾದಿಯಲ್ಲೇ ರಾಜ್ಯ ಸಕರ್ಾರ ನಡೆಯುತ್ತಿದೆ. ಸಗ್ರೀವಾಜ್ಞೆಗಳನ್ನು ಕ್ರಮಬದ್ಧಗೊಳಿಸಲು ವಿಧಾನಸಭೆಯಲ್ಲಿ ಕೃಷಿ ಮಸೂದೆ ಮಂಡಿಸುತ್ತ ತಾನೂ ರೈತ ವಿರೋಧಿ ಎಂಬುದನ್ನು ಸರ್ಕಾರ ಸಾಬೀತುಪಡಿಸಿದೆ ಎಂದು ದೂರಿದರು.

ಎಐಕೆಎಸ್ ರಾಜ್ಯ ಉಪಾಧ್ಯಕ್ಷ ಬಾಬುರಾವ ಹೊನ್ನಾ, ಪ್ರಮುಖರಾದ ಮಾರುತಿ ಬೌದ್ಧೆ, ನಜೀರ್ ಅಹ್ಮದ್ ಚೊಂಡಿ, ಪ್ರಕಾಶ ಸುಕಾಳೆ, ಮಾಣಿಕ ಖಾನಾಪುರಕರ್, ಎಂಡಿ ಶಫಾಯತ್ ಅಲಿ, ಖಮರ್ ಪಟೇಲ್, ವಿನೋದ ರತ್ನಾಕರ್, ಪ್ರಭು ತಗಣಿಕರ್, ಅಲಿ ಅಹ್ಮದ್ ಖಾನ್ ಇತರರಿದ್ದರು. ಈ ವೇಳೆ ಶಾಸಕ ಬಿ.ನಾರಾಯಣರಾವ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net