

ವಿಜಯವಾಣಿ ಸುದ್ದಿಜಾಲ ಬೀದರ್
ನಗರ ಸೇರಿ ಜಿಲ್ಲಾದ್ಯಂತ ಚಿಂದಿ ಆಯುವ ಮತ್ತು ಭಿಕ್ಷೆ ಬೇಡುವ ಮಕ್ಕಳ ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಡಿಸಿ ಜಿಲ್ಲಾಧಿಕಾರಿ ರಾಮಚಂದ್ರನ್ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಣೆಯಲ್ಲಿ ಬುಧವಾರ ನಗರದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ವಿವಿಧೆಡೆ ದಾಳಿ ನಡೆಸಿ ಮೊದಲ ದಿನವೇ 24 ಮಕ್ಕಳನ್ನು ರಕ್ಷಿಸಲಾಯಿತು.
ಬೆಳಗ್ಗೆ 7ಕ್ಕೆ ಶುರುವಾದ ಕಾರ್ಯಾಚರಣೆ ನಿರಂತರ 5 ಗಂಟೆ ನಡೆಯಿತು. ಅಧಿಕಾರಿಗಳ ತಂಡ ವಿವಿಧೆಡೆ ಸಂಚರಿಸಿ ದಾಳಿ ನಡೆಸಿ, 13 ಗಂಡು ಮಕ್ಕಳು ಹಾಗೂ 11 ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿತು. ಇವರಿಗೆ ಬಾಲಕರ ಮತ್ತು ಬಾಲಕಿಯರ ಬಾಲ ಮಂದಿರದಲ್ಲಿ ಆಶ್ರಯ ನೀಡಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ಗೌರಿಶಂಕರ ಪರತಾಪುರೆ ಮೇಲ್ವಿಚಾರಣೆಯಲ್ಲಿ ಮೈಲೂರ, ಗುಂಪಾ, ಗಾಂಧಿಗಂಜ್, ಓಲ್ಡ್ ಸಿಟಿ, ಮಂಗಲಪೇಟ್, ನಾವದಗೇರಿ, ಹೈದರಾಬಾದ್ ರಸ್ತೆ, ಜನವಾಡ ರಸ್ತೆ, ನೌಬಾದ್, ಪ್ರತಾಪನಗರ, ಆಟೋನಗರ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಇತರೆಡೆ ಮೂರ್ನಾಲ್ಕು ವಾಹನಗಳ ಮೂಲಕ ದಿಢೀರ್ ದಾಳಿ ನಡೆಸಿ ಈ ಮಕ್ಕಳನ್ನು ರಕ್ಷಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾರ್ಯಾಚರಣೆಗೆ ಚಾಲನೆ ನೀಡಿದ ಮಾತನಾಡಿದ ಡಿಸಿ ರಾಮಚಂದ್ರನ್ ಅವರು, ನಗರದ ಎಲ್ಲಾದರೂ ಇಂಥ ಮಕ್ಕಳು ಕಂಡರೆ ರಕ್ಷಣೆ ಮಾಡಬೇಕು. ಈ ಕೆಲಸದಲ್ಲಿ ಜನರ ಸಹಕಾರ, ಸಹಭಾಗಿತ್ವ ಅಗತ್ಯವಿದೆ. ಪಾಲಕರು ವಿರೋಧಿಸಿದರೆ ಅವರಿಗೆ ತಿಳಿಹೇಳಬೇಕು. ಬರುವ ದಿನಗಳಲ್ಲಿ ಈ ಬಗ್ಗೆ ಸಭೆ ನಡೆಸಿ ಚರ್ಚಿಸಿ, ಪಾಲಕರಿಗೆ ಪರ್ಯಾಯ ಉದ್ಯೋಗ ಒದಗಿಸಲು, ಸರ್ಕಾರದಿಂದ ಮತ್ತಷ್ಟು ಸೌಲಭ್ಯ ಕಲ್ಪಿಸಲು ಪ್ರಯತ್ನಿಸೋಣ ಎಂದರು.
ಡಿಎಚ್ಒ ಡಾ.ವಿ.ಜಿ.ರಡ್ಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶಂಭುಲಿಂಗ ಹಿರೇಮಠ, ವಾತರ್ಾಧಿಕಾರಿ ಗವಿಸಿದ್ದಪ್ಪ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬದ್, ಬಾಲ ಕಾರ್ಮಿಕ ನಿರ್ಮೂಲನೆ ಯೋಜನೆ ನಿರ್ದೇಶಕ ಅರ್ಜುನ ಸಿತಾಳಗೇರಾ, ಬಾಲಭವನ ಸಮಿತಿ ಸಂಯೋಜಕ ಸೂರ್ಯಕಾಂತ ಮೋರೆ, ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ಗುಂಡಪ್ಪ ಸೇರಿದಂತೆ ನಾನಾ ಸಂಘ, ಸಂಸ್ಥೆ ಪ್ರಮುಖರು ಇದ್ದರು.
ನಿರಂತರ ಕಾರ್ಯಾಚರಣೆ
ಜಿಲ್ಲೆಯಲ್ಲಿ ಚಿಂದಿ ಆಯುವ ಮತ್ತು ಭಿಕ್ಷೆ ಬೇಡುವ ಮಕ್ಕಳ ರಕ್ಷಣಾ ಕಾರ್ಯಾಚರಣೆ ನಿರಂತರ ಮುಂದುವರಿಯಲಿದೆ ಎಂದು ಡಿಸಿ ರಾಮಚಂದ್ರನ್ ತಿಳಿಸಿದ್ದಾರೆ. ನಗರಸಭೆ, ಪುರಸಭೆ ಅಧಿಕಾರಿಗಳ ಸಹಕಾರ ಪಡೆದು ಬರುವ ದಿನಗಳಲ್ಲಿ ಕೆಲ ಕಾಲನಿಗಳಿಗೆ ಭೇಟಿ ನೀಡಿ ತಿಳಿವಳಿಕೆ ಕಾರ್ಯಕ್ರಮ ರೂಪಿಸಲಾಗುವುದು. ಈ ಕಾರ್ಯಾಚರಣೆಯನ್ನು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಸುವುದಾಗಿ ಹೇಳಿದರು.
ನಗರ ಸೇರಿದಂತೆ ಜಿಲ್ಲೆಯಲ್ಲಿ ಚಿಂದಿ ಆಯುವ ಮತ್ತು ಭಿಕ್ಷೆ ಬೇಡುವ ಮಕ್ಕಳು ಇದ್ದರೆ ಅವರನ್ನು ಹಿಡಿದು ಪುನರ್ವಸತಿ ಕಲ್ಪಿಸುವ, ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. | ರಾಮಚಂದ್ರನ್ ಜಿಲ್ಲಾಧಿಕಾರಿ