

ಬೀದರ್: ನಗರ ಸೇರಿ ಜಿಲ್ಲಾದ್ಯಂತ ಮತ್ತೆ ವರುಣಾರ್ಭಟ ಶುರುವಾಗಿದ್ದು, ಪ್ರವಾಹದ ಆತಂಕ ಎದುರಾಗಿದೆ.
ಬೀದರ್ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಶುಕ್ರವಾರ ರಾತ್ರಿ 11 ರಿಂದ ನಿರಂತರ ಗುಡುಗು, ಮಿಂಚಿನ ಆರ್ಭಟದೊಂದಿಗೆ ಮಳೆ ಬರುತ್ತಿದ್ದು, ಶನಿವಾರ ಮುಂದುವರೆದಿದೆ. ಔರಾದ್, ಬೀದರ್, ಭಾಲ್ಕಿ, ಹುಮನಾಬಾದ್ ತಾಲೂಕಿನಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ.
ಸೆ.15ರಿಂದ ನಾಲ್ಕು ದಿವಸ ದಾಖಲೆ ಮಳೆ ಸುರಿದಿತ್ತು. ಅತಿವೃಷ್ಟಿಗೆ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಗಿಂತ ಅಧಿಕ ಬೆಳೆ ಹಾನಿಯಾಗಿ, ಅಪಾರ ಆಸ್ತಿಪಾಸ್ತಿ ಸಹ ನಷ್ಟವಾಗಿತ್ತು. ವಾರದ ಬಳಿಕ ಮತ್ತೆ ಬರುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಜನತೆಯಲ್ಲಿ ಆತಂಕ ಮೂಡಿಸಿದೆ.
ಬೀದರ್ ನಗರದಲ್ಲಿ ಮಳೆಯು ಸಾಮಾನ್ಯ ಜನಜೀವನಕ್ಕೆ ಅಸ್ತವ್ಯಸ್ತಗೊಳಿಸಿದೆ. ಅನೇಕ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಜನರ ಪರಿತಾಪವಾಗಿದೆ. ನಗರದ ವಿವಿಧೆಡೆ ಗಿಡ, ಮರಗಳು ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಇಡೀ ನಗರ ನೀರುಮಯ ಎಂಬಂತಾಗಿದೆ.
ಸೆ. 15ರಿಂದ ನಾಲ್ಕು ದಿನ ಜಿಲ್ಲೆಯಲ್ಲಿ ಅತಿವೃಷ್ಟಿ ಆಗಿದೆ. ಇದಕ್ಕೆ ಒಂದು ವಾರದ ವಿರಾಮ ಸಿಕ್ಕಿತ್ತು. ಕಳೆದ ರಾತ್ರಿಯಿಂದ ಜಿಲ್ಲಾದ್ಯಂತ ವಾತಾವರಣ ಬದಲಾಗಿ ಮತ್ತೆ ಮಳೆ ಶುರುವಾಗಿದೆ. ಈಗಾಗಲೇ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಹಳ್ಳ, ಕೊಳ್ಳ ತುಂಬಿ ಹರಿದಿವೆ. ಕೆರೆಗಳು ಭರ್ತಿಯಾಗಿವೆ. ಈಗ ಮತ್ತೆ ಮಳೆ ಜೋರಾಗಿ ಬರುತ್ತಿರುವುದರಿಂದ ಪ್ರವಾಹದ ಅಪಾಯ ಸೃಷ್ಟಿಯಾಗುವ ಆತಂಕ ಎದುರಾಗಿದೆ.