ಬೀದರ್ ಜಿಲ್ಲೆಗೆ 10 ಇಆರ್ ಎಸ್ಸೆಸ್ ವಾಹನ

ERSS
Published on

ಬೀದರ್: ಪೊಲೀಸ್, ಅಗ್ನಿ ಶಾಮಕ ಮತ್ತು ವಿಪತ್ತು ತುರ್ತು ಸೇವೆಗಾಗಿ ಇನ್ಮುಂದೆ ಜನತೆ 112 ಸಂಖ್ಯೆಗೆ ಕಾಲ್ ಮಾಡಿ ತಕ್ಷಣದಲ್ಲೇ ನೆರವು ಪಡೆಯಲು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ಇಆರ್ ಎಸ್ಎಸ್) ಮಂಗಳವಾರದಿಂದ ಜಿಲ್ಲೆಯಲ್ಲಿ ಶುರುವಾಗುತ್ತಿದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವುಳ್ಳ 10 ವಾಹನ ಬಂದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಒಂದೇ ಭಾರತ-ಒಂದೇ ತುರ್ತು ಕರೆ ಸಂಖ್ಯೆ ಧ್ಯೇಯದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ರಾಜ್ಯದಲ್ಲಿ ಇದನ್ನು ಜಾರಿಗೊಳಿಸಲಾಗಿದೆ. ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತಿನ ಸಂದರ್ಭದಲ್ಲಿ ಸಾರ್ವಜನಿಕರು ತುರ್ತು ಸೇವೆಗಾಗಿ ಇನ್ಮುಂದೆ 112 ಸಂಖ್ಯೆಗೆ ಸಂಪರ್ಕಿಸಿದ್ದಲ್ಲಿ ಸಮೀಪದಲ್ಲಿರುವ ಇಆರ್ ಎಸ್ಎಸ್ ವಾಹನವು ತಕ್ಷಣ ನೆರವಿಗೆ ಧಾವಿಸುತ್ತದೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಈ ಯೋಜನೆಯಿಂದ ಪೊಲೀಸ್, ಅಗ್ನಿಶಾಮಕ ಸೇವೆಗಾಗಿ ಬೇರೆ ಬೇರೆ ಸಂಖ್ಯೆಗಳಿಗೆ ಕರೆ ಮಾಡುವ ಅಗತ್ಯವಿರುವುದಿಲ್ಲ. 112ಕ್ಕೆ ಕಾಲ್ ಮಾಡಿದರೆ ಎಲ್ಲದಕ್ಕೂ ತುರ್ತು ಸೇವೆ ಲಭಿಸಲಿದೆ. ಕರೆ ಸ್ವೀಕರಿಸಿದ ತಕ್ಷಣ ವಾಹನ ಅಲ್ಲಿಗೆ ತಲುಪಿ ಕಷ್ಟದಲ್ಲಿದ್ದವರಿಗೆ ನೆರವಾಗುವ ಕಾರ್ಯ ಮಾಡಲಿದೆ. ಕರೆ ಸ್ವೀಕರಿಸುವಾಗಲೇ ಕರೆ ಎಲ್ಲಿಂದ ಬಂತು? ಎಷ್ಟು ಸಮಯಕ್ಕೆ ಬಂತು ಎಂಬ ಮಾಹಿತಿ ಉಪಗ್ರಹದ ಆಧರಿತ ಅಕ್ಷಾಂಶ-ರೇಖಾಂಶ ಸಹಿತ ದಾಖಲಾಗುತ್ತದೆ. ಹತ್ತಿರದಲ್ಲಿ ನಿಂತ ವಾಹನ ಬೇಗ ಘಟನಾ ಸ್ಥಳಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗುತ್ತದೆ. ವಾಹನದಲ್ಲಿ ಸ್ಟಾಟ್೯ ಗುಂಡಿ ಒತ್ತಿದರೆ ಎಲ್ಲಿ ಹೋಗಬೇಕು ಎನ್ನುವ ಡಿಜಿಟಲ್ ಮಾರ್ಗಸೂಚಿಯನ್ನು ತೋರಿಸುವ ವಿನೂತನ ವ್ಯವಸ್ಥೆ ಸಹ ಇದರಲ್ಲಿದೆ ಎಂದು ವಿವರಿಸಿದ್ದಾರೆ.

ಇಂಡಿಯಾ ಆ್ಯಪ್ ಬಳಕೆ ಮಾಡಿ
ಪೊಲೀಸ್ ಇಲಾಖೆಯಿಂದ ತುರ್ತು ಇಆರ್ ಎಸ್ಎಸ್ ಯೋಜನೆಗೆ ಜಿಲ್ಲಾದ್ಯಂತ ಮಂಗಳವಾರ ಚಾಲನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪೊಲೀಸ್, ಅಗ್ನಿಶಾಮಕ ಮತ್ತು ವಿಪತ್ತು ತುರ್ತು ಸೇವಾಗಿ ಜನತೆ ಇನ್ಮುಂದೆ 112 ಸಂಖ್ಯೆಗೆ ಸಂಪರ್ಕಿಸಿದ್ದಲ್ಲಿ ಸಮೀಪದಲ್ಲಿರುವ ಇಆರ್ ಎಸ್ಎಸ್ ವಾಹನವು ಕೂಡಲೇ ನೆರವಿಗೆ ಬರಲಿದೆ. ಇದಕ್ಕಾಗಿ ಜಿಲ್ಲೆಗೆ 10 ಹೊಸ ಸ್ಕಾರ್ಪಿಯೋ ವಾಹನ ಬಂದಿವೆ. ಇವುಗಳ ಜತೆಗೆ 5 ಹೈವೇ ಗಸ್ತು ವಾಹನ ಸೇರಿ ಒಟ್ಟು 15 ವಾಹನಗಳನ್ನು ತುರ್ತು ಸೇವೆಗೆ ಬಳಸಲಾಗುತ್ತಿದೆ. ಎಲ್ಲ ವಾಹನಗಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿವೆ ಎಂದರು. ಸ್ಥಿರ ದೂರವಾಣಿ ಅಥವಾ ಮೊಬೈಲ್ ಮೂಲಕ 112ಕ್ಕೆ ಕರೆ ಮಾಡಬಹುದು. ಸ್ಮಾಟ್೯ ಫೋನ್ ನಲ್ಲಿ 112 ಇಂಡಿಯಾ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ನೋಂದಾಯಿಸಿಕೊಂಡು ಆ್ಯಪ್ ನಲ್ಲಿನ ಎಸ್ ಒಎಸ್ ಬಟನ್ ಒತ್ತುವ ಮೂಲಕ ಮನವಿ ಕಳಿಸಬಹುದು ಎಂದು ತಿಳಿಸಿದರು. ಸಮಸ್ಯೆ ತಿಳಿಸಿದ ನಂತರ ವಿವರಗಳನ್ನು ಸಮೀಪದ ಇಆರ್ ಎಸ್ಎಸ್ ವಾಹನಕ್ಕೆ ತಿಳಿಸಲಾಗುವುದು. ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ನೆರವಿಗೆ ಬರುವರು. ಈ ವಾಹನಗಳ ಲೋಕೇಷನ್ ಜಿಪಿಎಸ್ ನಿಂದ ಪಡೆಯಲಾಗುತ್ತದೆ. ವಾಹನ ಸ್ಥಳಕ್ಕೆ ತಲುಪಿದ ಮತ್ತು ಸಮಸ್ಯೆಗೆ ಸ್ಪಂದಿಸಿದ ಬಗ್ಗೆ ಜಿಲ್ಲಾ ಸಮನ್ವಯ ಕೇಂದ್ರ (ಡಿಸಿಸಿ) ಮೂಲಕ ಖಚಿತಪಡಿಸಿಕೊಳ್ಳಲಾಗುವುದು ಎಂದು ಹೇಳಿದರು. 112 ಆ್ಯಪ್ ಅನ್ನು ಒಮ್ಮೆ ಡೌನ್ಲೋಡ್ ಮಾಡಿ ವಿವರಗಳನ್ನು ನೋಂದಣಿ ಮಾಡಿಕೊಳ್ಳಬೇಕು. ತಮ್ಮ ಕುಟುಂಬ ಸದಸ್ಯರ, ಸ್ನೇಹಿತರ ವಿವರಗಳನ್ನು ನೀಡಿದ್ದಲ್ಲಿ ತುರ್ತು ಪರಿಸ್ಥಿತಿಯಲ್ಲಿ 112 ಸಂಖ್ಯೆಗೆ ಮನವಿ ಹೋಗುವುದರ ಜತೆಗೆ ಕುಟುಂಬ ಸದಸ್ಯರು, ಸ್ನೇಹಿತರಿಗೂ ಅಲಟ್೯ ಸಂದೇಶ ಹೋಗುತ್ತದೆ. 112 ಆ್ಯಪ್ ನಲ್ಲಿ ಸ್ವಯಂ ಸೇವಕ ಆಗಿ ನೋಂದಾಯಿಸಿಕೊಳ್ಳಬಹುದು. ಯಾರಾದರೂ ನೆರವಿಗಾಗಿ ಮನವಿ ಸಲ್ಲಿಸಿದ್ದಲ್ಲಿ ಹತ್ತಿರದಲ್ಲಿನ ಸ್ವಯಂ ಸೇವಕರಿಗೆ ವಿವರಗಳೊಂದಿಗೆ ಅಲಟ್೯ ಸಂದೇಶ ಕಳುಹಿಸಲಾಗುತ್ತದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.

108 ಎಂದಿನಂತೆ ಇರಲಿದೆ
ವೈದ್ಯಕೀಯ ತುರ್ತು ಸಂಖ್ಯೆ 108 ಎಂದಿನಂತೆ ಚಾಲ್ತಿಯಲ್ಲಿರಲಿದೆ ಎಂದು ಎಸ್ಪಿ ನಾಗೇಶ ಹೇಳಿದರು. ಇಆರ್ ಎಸ್ ಎಸ್ ನಲ್ಲಿ ಇನ್ನೂ 108 ಆಂಬುಲೆನ್ಸ್ ಸೇವೆ ಸೇರಿಲ್ಲ. ಹೀಗಾಗಿ ವೈದ್ಯಕೀಯ ತುರ್ತು ಸೇವೆಗಾಗಿ 108 ಸಂಖ್ಯೆಗೆ ಕರೆ ಮಾಡಬಹುದು. ಬರುವ ದಿನಗಳಲ್ಲಿ ವೈದ್ಯಕೀಯ ಸೇವೆ ಸಹ 112 ಸಂಖ್ಯೆಗೆ ಸೇರಿಸುವ ಸಾಧ್ಯತೆಗಳಿವೆ ಎಂದು ಹೇಳಿದರು.

ಅಲ್ಪ ಅವಧಿಯಲ್ಲಿ ಸೇವೆ ಒದಗಿಸುವುದು ಯೋಜನೆ ಉದ್ದೇಶ. ಈ ಸಹಾಯವಾಣಿ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ತುರ್ತು ಸಮಸ್ಯೆಯಿದ್ದಲ್ಲಿ ಜನರು 112 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ದಿನದ 24 ಗಂಟೆಯೂ ಈ ಸೇವೆ ಲಾಭ ಪಡೆಯಬಹುದು.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ

ತುರ್ತು ಸೇವೆಗಾಗಿ ಸಾರ್ವಜನಿಕರು ಇನ್ಮುಂದೆ 100 ಸಂಖ್ಯೆಗೆ ಕರೆ ಮಾಡುವುದನ್ನು ನಿಲ್ಲಿಸಿ 112ಕ್ಕೆ ಡಯಲ್ ಮಾಡಬೇಕು. 112 ಇಂಡಿಯಾ ಆ್ಯಪ್ ಎಲ್ಲರೂ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಸೌಲಭ್ಯ ಎಲ್ಲರೂ ಭರಪೂರ ಬಳಸಿಕೊಂಡು ಸುರಕ್ಷಿತ, ನೆಮ್ಮದಿಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು.| ಡಿ.ಎಲ್.ನಾಗೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net