ಬೀದರ್ ಎಪಿಎಂಸಿಗೆ ಆನಂದೆ ಸಾರಥ್ಯ

apmc
Published on

ಬೀದರ್: ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ನೂತನ ಅಧ್ಯಕ್ಷರಾಗಿ ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ ವಿಜಯಕುಮಾರ ಆನಂದೆ ಆಯ್ಕೆಯಾಗಿದ್ದಾರೆ.

ನಗರದ ಗಾಂಧಿಗಂಜ್ ನಲ್ಲಿರುವ ಎಪಿಎಂಸಿಯಲ್ಲಿ ಶನಿವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಆನಂದೆ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಗಂಗಾದೇವಿ ಅವರು ಅವಿರೋಧ ಆಯ್ಕೆ ಘೋಷಿಸಿದರು. ಅನೀಲಕುಮಾರ ಪನ್ನಾಳೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು.

ಆನಂದೆ ಅವಿರೋಧ ಆಯ್ಕೆ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಸಿದರು. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷರಾಗಿ ಅನೀಲಕುಮಾರ ಪನ್ನಾಳೆ, ಭೀಮಾಶಂಕರ ಪಾಟೀಲ್ ಕಾಡವಾದ, ಪ್ರಮುಖರಾದ ವಿಜಯಕುಮಾರ ಪಾಟೀಲ್ ಗಾದಗಿ, ರಾಜೇಂದ್ರ ಪೂಜಾರಿ ಇತರರು ಹಾಜರಿದ್ದರು.

ಎಪಿಎಂಸಿ ಕೊನೇ ಅವಧಿ ಇದಾಗಿದೆ. ಪನ್ನಾಳೆ ಅವರು 6 ತಿಂಗಳು ಅಧಿಕಾರ ನಡೆಸಿ ರಾಜೀನಾಮೆ ನೀಡಿದ್ದಾರೆ. ಇನ್ನೂ 13 ತಿಂಗಳ ಅಧಿಕಾರ ಆನಂದೆ ಅವರಿಗೆ ದಕ್ಕಿದೆ. ಕಳೆದ ಜೂನ್ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಭಾರಿ ಪೈಪೋಟಿ ನಡೆದಿದ್ದ ಕಾರಣಕ್ಕೆ ಪಕ್ಷದ ಮುಖಂಡರು 6:14 ಅನುಪಾತದ ಸೂತ್ರ ಹೆಣೆದು ಅಧಿಕಾರ ಹಂಚಿಕೆ ಮಾಡಿದ್ದರು. ಪನ್ನಾಳೆ ಮೊದಲ 6 ತಿಂಗಳು ಅಧ್ಯಕ್ಷರಾಗಿ, ಉಳಿದ 14 ತಿಂಗಳು ವಿಜಯಕುಮಾರ ಆನಂದೆ ಅವರು ಅಧ್ಯಕ್ಷರಾಗಿ ಮುಂದುವರಿಯಬೇಕು ಎನ್ನುವ ಸೂತ್ರ ಮಾಡಿದ್ದರು. ಇದರಂತೆ 6 ತಿಂಗಳು ಪನ್ನಾಳೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ರಾಜೀನಾಮೆ ಸಲ್ಲಿಸಿದ್ದರು.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಅವಿರೋಧ ಆಯ್ಕೆ ಪ್ರಕ್ರಿಯೆ ಜರುಗಿತು. ಬೆಲ್ದಾಳೆ ಪ್ರಯತ್ನದಿಂದ ಕಳೆದ ಮೂರು ಅವಧಿಯಿಂದ ಬೀದರ್ ಎಪಿಎಂಸಿಯು ಬಿಜೆಪಿ ಹಿಡಿತದಲ್ಲಿದೆ. ಕಾಂಗ್ರೆಸಿಗರ ತೀವ್ರ ಕಸರತ್ತಿನ ಬಳಿಕ ಎಪಿಎಂಸಿಯಲ್ಲಿ ಕಮಲ ಅರಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net