ಬೀಟ್​ಗೊಂದು ಪೊಲೀಸ್ ಮರ!

H23 Gokul Police
Published on

ಹುಬ್ಬಳ್ಳಿ: 24/7 ಒತ್ತಡದ ಕರ್ತವ್ಯದ ನಡುವೆಯೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಧ್ಯೇಯೋದ್ದೇಶದೊಂದಿಗೆ ಗೋಕುಲ ರೋಡ್ ಠಾಣೆ ಪೊಲೀಸರ ತಂಡವು ‘ಬೀಟ್​ಗೊಂದು ಪೊಲೀಸ್ ಮರ’ ಎಂಬ ವಿಭಿನ್ನ ಪ್ರಯತ್ನಕ್ಕೆ ಸಜ್ಜಾಗಿದೆ.

ಪೊಲೀಸರೆಂದರೆ ಲಾಠಿ ಏಟು, ಬೂಟಿನ ಸದ್ದು ಎಂದು ಹಲವರು ಭಾವಿಸಿರುತ್ತಾರೆ. ಆದರೆ, ಪೊಲೀಸರೂ ಮನುಷ್ಯರೇ, ಅವರಿಗೂ ಭಾವನೆಗಳಿರುತ್ತವೆ. ಅವರಲ್ಲೂ ಮನುಷ್ಯತ್ವ, ಸಾಮಾಜಿಕ ಕಳಕಳಿ, ಪರಿಸರ ಕಾಳಜಿ ಇರುತ್ತದೆ ಎಂಬುದಕ್ಕೆ ಗೋಕುಲ ರೋಡ್ ಪೊಲೀಸರ ಈ ಪರಿಸರಮುಖಿ ಯೋಜನೆಯೇ ಸಾಕ್ಷಿಯಾಗಿದೆ.

ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್​ನ ಪ್ರಮುಖ ಪೊಲೀಸ್ ಠಾಣೆಗಳಲ್ಲಿ ಗೋಕುಲ ರೋಡ್ ಠಾಣೆಯೂ ಒಂದು. ಈ ಠಾಣೆಯಲ್ಲಿ 92 ಸಿಬ್ಬಂದಿ ಇದ್ದಾರೆ. ಠಾಣೆ ವ್ಯಾಪ್ತಿಯಲ್ಲಿ ಒಟ್ಟು 68 ಬೀಟ್​ಗಳಿವೆ. ಬೀಟ್​ಗೆ ಒಂದರಂತೆ ಸಸಿ ನೆಟ್ಟು, ಪೋಷಣೆ ಮಾಡಿ ಅದನ್ನು ಹೆಮ್ಮರವಾಗಿಸುವ ಕನಸನ್ನು ಠಾಣೆಯ ಇನ್​ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಕಂಡಿದ್ದಾರೆ. ಈ ಕಾರ್ಯಕ್ಕೆ ಠಾಣೆಯ ಅಧಿಕಾರಿ, ಸಿಬ್ಬಂದಿ ಕೈಜೋಡಿಸಿದ್ದಾರೆ. ಪೊಲೀಸ್ ಆಯುಕ್ತ ಲಾಭೂರಾಮ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಬೆಂಬಲ ನೀಡಿದ್ದಾರೆ.

ಈಗಾಗಲೇ ಬೀಟ್​ಗೆ ಒಬ್ಬ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ಸಿಬ್ಬಂದಿ ತಮ್ಮ ಬೀಟ್ ವ್ಯಾಪ್ತಿಯಲ್ಲಿ ಒಂದು ಸಸಿ ನೆಟ್ಟು ಅದನ್ನು ಹೆಮ್ಮರವಾಗಿ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಬೀಟ್ ವ್ಯಾಪ್ತಿಯಲ್ಲಿ ಪಾಲಿಕೆ ವ್ಯಾಪ್ತಿಯ ಖಾಲಿ ಜಾಗೆಯನ್ನು ಗುರುತಿಸಿದ್ದಾರೆ. ವಿದ್ಯುತ್, ದೂರವಾಣಿ ಕೇಬಲ್ ಹಾದು ಹೋಗದ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಸಹಕಾರದೊಂದಿಗೆ ಬೇವು, ಅರಳಿ, ಹುಣಸೆ ಮುಂತಾದ ಆಮ್ಲಜನಕ ಹೆಚ್ಚು ಉತ್ಪಾದಿಸುವ ಸಸಿಗಳನ್ನು ನೆಡಲಿದ್ದಾರೆ.

ಸಸಿ ನೆಟ್ಟ ನಂತರ ಅದಕ್ಕೆ ಕಬ್ಬಿಣದ ಬೇಲಿ ಹಾಕಲು ತಯಾರಿ ಮಾಡಿಕೊಂಡಿದ್ದಾರೆ. ದನ-ಕರುಗಳು ದಾಳಿ ಮಾಡದಂತೆ ತಂತಿ ಬೇಲಿ ಹಾಕಲಿದ್ದಾರೆ. ಅದರ ಸುತ್ತ ಪರಿಸರ ಕಾಳಜಿಯ ಘೊಷಣೆಗಳನ್ನು ಮುದ್ರಿಸಲಿದ್ದಾರೆ. ‘ಈ ಬಾರಿಯ ಕರೊನಾ ಆಕ್ಸಿಜನ್ ಮಹತ್ವ ತಿಳಿಸಿದೆ. ಆದ್ದರಿಂದ ನಮ್ಮ ನಡೆ ಪರಿಸರದೆಡೆ’ ಎಂದು ಜಾಗೃತಿ ಸಂದೇಶ ಸಾರಲಿದ್ದಾರೆ.

ಹೀಗೆ ನಾಮಕರಣ

ಸಸಿ ನೆಟ್ಟ ನಂತರ ಆಯಾ ಬೀಟ್ ಸಿಬ್ಬಂದಿ ನಿರಂತರವಾಗಿ ನೀರು, ಗೊಬ್ಬರ ಹಾಕುವ ಮೂಲಕ ಪೋಷಿಸುವ ಹೊಣೆ ಹೊತ್ತಿದ್ದಾರೆ. ಈ ಸಸಿ ಬೆಳೆದು ಗಿಡವಾಗಿ ಮರವಾದ ಬಳಿಕ ಸ್ಥಳೀಯರ ನೆರವಿನಿಂದ ಮರದ ಸುತ್ತ ಕಟ್ಟೆ ಕಟ್ಟಿಸಲಾಗುವುದು. ಅದಕ್ಕೆ ‘ಪೊಲೀಸ್ ಮರ’ ಎಂದು ನಾಮಕರಣ ಮಾಡಲಾಗುವುದು ಎನ್ನುತ್ತಾರೆ ಇನ್​ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ.

ಕರೊನಾ ಎರಡನೇ ಅಲೆ ನಮಗೆ ಆಕ್ಸಿಜನ್ ಮಹತ್ವದ ಪಾಠ ಕಲಿಸಿದೆ. ಹಾಗಾಗಿ, ನಮ್ಮ ಕೈಲಾದಷ್ಟು ಸಸಿ ನೆಟ್ಟು ಪೋಷಿಸಬೇಕು ಎಂಬ ಸದುದ್ದೇಶದಿಂದ ಬೀಟ್​ಗೊಂದು ಮರ ಯೋಜನೆ ರೂಪಿಸಿದ್ದೇವೆ. ವಾರದೊಳಗೆ ಸಸಿ ನೆಟ್ಟು ಚಾಲನೆ ನೀಡಲಿದ್ದೇವೆ.| ಜೆ.ಎಂ. ಕಾಲಿಮಿರ್ಚಿ, ಇನ್​ಸ್ಪೆಕ್ಟರ್, ಗೋಕುಲ ರೋಡ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net