

ಹಾಸನ: ಕಾರೆಕೆರೆ ಕೃಷಿ ಮಹಾವಿದ್ಯಾಲಯ ಹಾಸನದ ಅಂತಿಮ ವರ್ಷದ ಬಿಎಸ್‌ಸಿ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ಬುಧವಾರ ಗ್ರಾಮಸ್ಥರಿಗೆ ಬೀಜಾಮೃತ, ಜೀವಾಮೃತ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾಲೇಜಿನ ಕೃಷಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸದಾಶಿವನಗೌಡ ಅವರು ರೈತರನ್ನು ಕುರಿತು ಬೀಜೋಪಚಾರದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಬೀಜಾಮೃತ ಮತ್ತು ಜೀವಾಮೃತ ಮಾಡುವ ವಿಧಾನ ಹಾಗೂ ಅದರ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಬೀಜಾಮೃತ ಮಾಡುವುದರಿಂದ 100 ಪ್ರತಿಶತ ಬೀಜ ಮೊಳಕೆಯೊಡೆಯುವಿಕೆಯನ್ನು ಕಾಣಬಹುದು. ಅದಕ್ಕಾಗಿ ರಾಸಾಯನಿಕಗಳ ಬದಲಾಗಿ ನೈಸರ್ಗಿಕವಾಗಿ ದೊರಕುವ ಕೃಷಿ ಮತ್ತು ದನಕರುಗಳ ತ್ಯಾಜ್ಯವನ್ನು ಬಳಸಿ ವಿವಿಧ ಸಾವಯವ ಗೊಬ್ಬರ ಹಾಗೂ ಕೀಟನಾಶಕವಾಗಿ ಬಳಸಬಹುದು. ಇದರಿಂದ ಕೃಷಿಯಲ್ಲಿ ಖರ್ಚು ಕಡಿಮೆ ಮಾಡುವುದು ಹಾಗೂ ಗುಣಮಟ್ಟದ ಆಹಾರೋತ್ಪನ್ನ ಪಡೆಯಬಹುದು, ಇಳುವರಿಯನ್ನು ಹೆಚ್ಚಿಸಿಕೊಂಡು ಲಾಭದಾಯಕ ಕೃಷಿಯನ್ನು ಮಾಡಬಹುದು ಎಂದು ಮಾಹಿತಿ ನೀಡಿದರು.