

ಮೈಸೂರು: ರೈತರು ಸಾವಯವ ಕೃಷಿ ಪದ್ಧತಿಗೆ ಮರಳಬೇಕಾದರೆ ಬಿತ್ತನೆ ಬೀಜ ಸ್ವಾವಲಂಬನೆ ಸಾಧಿಸುವುದು ಅತ್ಯವಶ್ಯಕ ಎಂದು ರಾಜ್ಯಸಭಾ ಸದಸ್ಯ ಬಿಹಾರದ ಅನಿಲ್ ಹೆಗಡೆ ಅಭಿಪ್ರಾಯಪಟ್ಟರು.
ಸುಸ್ಥಿರ ಸಮಗ್ರ ಕೃಷಿಗಾಗಿ ಮೈತ್ರಿ ಸಂಸ್ಥೆ (ಆಶ) ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ರಾಷ್ಟ್ರಮಟ್ಟದ 5ನೇ ಕಿಸಾನ್ ಸ್ವರಾಜ್ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದರು.
ಕುಲಾಂತರಿ ಬೀಜಗಳು ಸಂಪೂರ್ಣ ಸಾವಯ ಕೃಷಿಯ ವಿರೋಧಿಯಾಗಿದೆ. ಕುಲಾಂತರಿ ಬೀಜಗಳು ನಮ್ಮ ಪರಿಸರಕ್ಕೆ ಹೊಂದಿಕೊ ಂಡು ಬೆಳೆಯುವುದಿಲ್ಲ. ಹಾಗಾಗಿ ಅವುಗಳ ಬೆಳವಣಿಗೆಗೆ ಬಹುರಾಷ್ಟ್ರೀಯ ಕಂಪನಿಗಳು ನೀಡುವ ರಸಗೊಬ್ಬರ ಹಾಗೂ ಕೀಟನಾಶಕಗಳನ್ನೇ ಬಳಕೆ ಮಾಡಬೇಕು. ಕಲಾಂತರಿ ಬೀಜ ಪಡೆದು ಕೃಷಿ ಚಟುವಟಿಕೆ ಕೈಗೊಂಡರೆ ಸಾವಯವ ಕೃಷಿಯನ್ನು ಕೈಗೊಳ್ಳಲು ಸಾಧ್ಯವೇ ಇಲ್ಲ. ಈ ಎಚ್ಚರ ರೈತರಲ್ಲಿ ಇರಬೇಕು ಎಂದರು.
ಬಾಸ್ಮತಿ ಅಕ್ಕಿಯನ್ನು ಬಹುರಾಷ್ಟ್ರೀಯ ಕಂಪನಿ ಪೇಟೆಂಟ್ ಪಡೆದುಕೊಂಡಿತ್ತು. ಆದರೆ, ರೈತರ ಹೋರಾಟದ ಫಲವಾಗಿ ಬಾಸ್ಮತಿ ಅಕ್ಕಿಯನ್ನು ಬೆಳೆಯುವ ಹಕ್ಕು ರೈತರಿಗೆ ದೊರೆತ್ತಿದೆ. ಈ ರೀತಿ ರೈತರಿಂದ ಎಲ್ಲವನ್ನು ಕಸಿಯುವ ಪ್ರಯತ್ನ ಬಹುರಾಷ್ಟ್ರೀಯ ಕಂಪನಿಗಳಿಂದ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇರಳದ ಪ್ರಗತಿಪರ ಕೃಷಿಕ ಶ್ರೀಧರ್ ರಾಧಾಕೃಷ್ಣನ್ ಮಾತನಾಡಿ, ಮಣ್ಣು, ಪರಿಸರ, ವಾತಾವರಣ ನಮಗೆ ಮುಖ್ಯವಾಗುತ್ತಿಲ್ಲ. ಲಾಭ ಗಳಿಕೆಯ ಆಧಾರದ ಮೇಲೆ ಎಲ್ಲವನ್ನು ನಾವು ನೋಡುತ್ತಿರುವುದು ಕಳವಳಕಾರಿ ಸಂಗತಿ. ಕೃಷಿ ಚಟುವಟಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ, ಕ್ರಿಮಿನಾಶಕಗಳನ್ನು ಬಳಕೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು ಕಡಿಮೆ ಮಾಡಿ ಸಾವಯವ ಕೃಷಿಯ ಕಡೆಗೆ ಮುಖ ಮಾಡಬೇಕು. ಭೂಮಿಯ ಆರೋಗ್ಯವನ್ನು ಕಾಪಾಡುವುದು ರೈತರು ಹಾಗೂ ಜನರ ಕರ್ತವ್ಯವವಾಗಿದೆ ಎಂದರು.
ಕೇರಳದ ಪ್ರಗತಿಪರ ಕೃಷಿಕರಾದ ಉಷಾ ಸೂಲಪಾಣಿ, ತಮಿಳುನಾಡಿನ ಕೃಷಿತಜ್ಞ ಕಾರ್ತಿಕ್ ಗುಣಶೇಖರ್, ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಪ್ರಭಾರ ಕುಲಪತಿ ಖಾದರ್ ಪಾಷ ಹಾಗೂ ಇತರರು ಇದ್ದರು.