ಬೀಜ, ರಸಗೊಬ್ಬರ ಕೊರತೆಯಾಗದಂತೆ ನಿಗಾವಹಿಸಿ

28 HBD 1
ಬೇಮಳಖೇಡ ರೈತ ಸಂಪರ್ಕ ಕೇಂದ್ರದಲ್ಲಿ ಮಂಗಳವಾರ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು. ಎಡಿ ಶರಣಕುಮಾರ ಕಲ್ಯಾಣಿ, ಪ್ರಮುಖರಾದ ಮಂಜುನಾಥ ಸುಣಗಾರ, ಬಸವರಾಜ ಚಟ್ಟನಳ್ಳಿ, ಶಿವಕುಮಾರ, ಅಶೋಕ ರೆಡ್ಡಿ, ಸುಶಾಂತ, ಭುವನೇಶ್ವರಿ, ವೀರಶೆಟ್ಟಿ ಬಸಲಾಪುರ, ಲಾಲಪ್ಪ ಪೋಲಕಪಳ್ಳಿ, ಶಣ್ಮುಕಪ್ಪ ಕಾರಕಂಪಳ್ಳಿ ಇತರರಿದ್ದರು.
Published on

ಚಿಟಗುಪ್ಪ: ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಬರುವ ತಾಲೂಕಿನ ೯ ಗ್ರಾಪಂನ ಯಾವ ಗ್ರಾಮದ ರೈತರಿಗೂ ಬಿತ್ತನೆ ಬೀಜ ಹಾಗೂ ಗೊಬ್ಬರ ಕೊರತೆ ಆಗದಂತೆ ಕೃಷಿ ಇಲಾಖೆ ಮುಂಜಾಗ್ರತೆ ವಹಿಸಬೇಕೆಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೇಮಳಖೇಡ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ರೈತ ಸಂಪರ್ಕ ಕೇಂದ್ರದಿಂದ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಳ್ಳುವ ಮುನ್ನ ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ಸೋಯಾಬೀನ್, ತೊಗರಿ, ಹೆಸರು ಗೊಬ್ಬರ, ಬಿತ್ತನೆ ಬೀಜ ದೊರೆಯುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ವಿತರಣೆ ಕೇಂದ್ರದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಬಿತ್ತನೆ ಬೀಜಗಳನ್ನು ಮಾರಾಟ ಮಾಡಬಾರದು, ಇಂತಹದ್ದು ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕೇಂದ್ರದೊಂದಿಗೆ ಉಪ ಕೇಂದ್ರಗಳಲ್ಲೂ ಬಿತ್ತನೆ ಬೀಜ ವಿತರಣೆ ಮಾಡಲಾಗುವುದು ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಕೃಷಿ ಇಲಾಖೆ ಎಡಿ ಶರಣಕುಮಾರ, ಗ್ರಾಪಂ ಅಧ್ಯಕ್ಷ ಮಂಜುನಾಥ ಸುಣಗಾರ, ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಚಟ್ಟನಳ್ಳಿ, ಉಪಾಧ್ಯಕ್ಷ ಶಿವಕುಮಾರ, ಉಡಬನಳ್ಳಿ ಪಿಕೆಪಿಎಸ್ ಅಧ್ಯಕ್ಷ ಅಶೋಕ ರೆಡ್ಡಿ, ಪಿಡಿಒ ಸುಶಾಂತ, ಕೃಷಿ ಅಧಿಕಾರಿ ಭುವನೇಶ್ವರಿ, ಮುಖಂಡರಾದ ವೀರಶೆಟ್ಟಿ ಬಸಲಾಪುರ, ಲಾಲಪ್ಪ ಪೋಲಕಪಳ್ಳಿ, ಶಣ್ಮುಕಪ್ಪ ಕಾರಕಂಪಳ್ಳಿ ಇತರರಿದ್ದರು.

ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಆದ್ಯತೆ ಮೇರೆಗೆ ಬಿತ್ತನೆ ಬೀಜ ಖರೀದಿಸುವುದು ಉತ್ತಮ. ಕಳಪೆ ಬೀಜ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಬೇಕು.ಬಿತ್ತನೆ ಬೀಜ ಖರೀದಿಸಿ ರಸೀದಿ ಜೋಪಾನವಾಗಿ ಇಟ್ಟುಕೊಳ್ಳಬೇಕು. ಖಾಸಗಿ ವ್ಯಕ್ತಿಗಳು ಕಡಿಮೆ ದರದಲ್ಲಿ ಬೀಜ ವಿತರಣೆ ಮಾಡಲಾಗುವುದು ಎಂದು ಬಂದರೆ ಅಂತವರ ಮಾತಿಗೆ ಮರುಳಾಗದೆ ಸರ್ಕಾರದಿಂದ ನೀಡುತ್ತಿರುವ ಬಿತ್ತನೆ ಬೀಜ ಖರೀದಿಸಿ.

| ಡಾ.ಶೈಲೇಂದ್ರ ಬೆಲ್ದಾಳೆ ಶಾಸಕ

ರೈತರ ಬೇಡಿಕೆಗೆ ಅನುಗುಣವಾಗಿ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ದಾಸ್ತಾನು ಮಾಡಲಾಗಿದ್ದು. ವಿತರಣೆ ಸಹ ಮಾಡಲಾಗುತ್ತಿದೆ.ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಪ್ರಕ್ರಿಯೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತ ಪಡಿಸಿಕೊಂಡು ಬಿತ್ತನೆ ಮಾಡಬೇಕು.

| ಶರಣಕುಮಾರ ಕಲ್ಯಾಣಿ

ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಹುಮನಾಬಾದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net