ಬೀಜ, ಗೊಬ್ಬರ ಕೊರತೆ ಆಗದಿರಲಿ

JADHAV
ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಿದ್ದ ಮುಂಗಾರು ಸಿದ್ಧತೆ ಪರಿಶೀಲನೆ ಸಭೆಯಲ್ಲಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿದರು. ರಿತೇಂದ್ರನಾಥ ಸೂಗೂರ, ಅನುಸೂಯಾ ಹೂಗಾರ, ಸಮದ್ ಪಟೇಲ್ ಇತರರಿದ್ದರು.
Published on

ಕಲಬುರಗಿ: ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ, ರಸಗೊಬ್ಬರ ಖರೀದಿಸುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಸೂಕ್ತ ಸಮಯದಲ್ಲಿ ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಒದಗಿಸಿ, ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಡಾ. ಉಮೇಶ ಜಾಧವ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮುಂಗಾರು ಸಿದ್ಧತೆ ಕುರಿತು ಬುಧವಾರ ಆಯೋಜಿಸಿದ್ದ 2022-23ನೇ ಸಾಲಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಕುರಿತು ಅರಿವು ಮೂಡಿಸಬೇಕು. ಬೀಜ, ರಸಗೊಬ್ಬರ, ಬೆಳೆ ವಿಮೆ, ಪಿಎಂ ಕಿಸಾನ್ ಮತ್ತು ಬೆಳೆ ಹಾನಿ ಸೇರಿ ಎಲ್ಲ ಯೋಜನೆ, ಪರಿಹಾರಧನ, ಸಹಾಯಧನ ಸಮಯಕ್ಕೆ ಸರಿಯಾಗಿ ನೀಡಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಗಳಿಗೆ ಬೀಜ ದಾಸ್ತಾನಿಗೆ ಕ್ರಮ ಕೈಗೊಳ್ಳಲಾಗಿದೆ. ತೊಗರಿ, ಹೆಸರು, ಉದ್ದು, ಮೆಕ್ಕೆಜೋಳ, ಸೋಯಾಬಿನ್ ಮತ್ತು ಇತರ ಬೆಳೆಗಳ ದಾಸ್ತಾನು ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ 13,785 ಕ್ವಿಂಟಾಲ್ ಬೀಜ ಬೇಡಿಕೆಗೆ ಕೇಂದ್ರ ಕಾರ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ, ಅಧಿಕಾರಿಗಳಾದ ಅನುಸೂಯಾ ಹೂಗಾರ, ಸಮದ್ ಪಟೇಲ್ ಇತರರಿದ್ದರು.

ರಸಗೊಬ್ಬರ ಕೊರತೆಯಿಲ್ಲ: 2022-23 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ ಬೆಳೆವಾರು ಕ್ಷೇತ್ರದ ಆಧಾರದ ಮೇಲೆ ಡಿಎಪಿ 54,300 ಮೆಟ್ರಿಕ್ ಟನ್, ಯೂರಿಯಾ 34,900, ಕಾಂಪ್ಲೆಕ್ಸ್ 17,200, ಎಂಒಪಿ 6350, ಎಸ್ಎಸ್ಪಿ 6645 ಸೇರಿ ಒಟ್ಟು 1,19,395 ಮೆಟ್ರಿಕ್ ಟನ್ ಬೇಡಿಕೆ ಇದೆ. ಕಳೆದ ಸಾಲಿನಲ್ಲಿ 71,182 ಮೆಟ್ರಿಕ್ ಟನ್ ರಸಗೊಬ್ಬರ ಬಳಕೆಯಾಗಿದೆ. ಕೇಂದ್ರ ಕಚೇರಿಯಿಂದ 73,096 ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಕಾಪು ದಾಸ್ತಾನು ಯೋಜನೆಯಡಿ ಡಿಎಪಿ 2,075 ಮೆಟ್ರಿಕ್ ಟನ್, ಯುರಿಯಾ (2,227), ಕಾಂಪ್ಲೆಕ್ಸ್ (185) ದಾಸ್ತಾನು ಮಾಡಲಾಗುತ್ತಿದೆ, ರಸಗೊಬ್ಬರ ಕೊರತೆಯಿಲ್ಲ ಎಂದು ರಿತೇಂದ್ರನಾಥ ಸೂಗೂರ ತಿಳಿಸಿದರು.

611.84 ಕೋಟಿ ರೂ. ನೆರವು: ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 2.83 ಲಕ್ಷ ರೈತರ ನೋಂದಣಿಯಾಗಿದೆ. 2019-20ನೇ ಸಾಲಿನಿಂದ ಇದುವರೆಗೆ 10 ಕಂತುಗಳಲ್ಲಿ 2,68,087 ರೈತರಿಗೆ 611.84 ಕೋಟಿ ರೂ. ಆರ್ಥಿಕ ನೆರವು ಸಿಕ್ಕಿದೆ. ಜಿಲ್ಲೆಯಲ್ಲಿ ದೂರು ಸಲ್ಲಿಸಿದ 28,876 ರೈತರಿಗೆ 31.69 ಕೋಟಿ ರೂ. ಪರಿಹಾರ ಒದಗಿಸಲಾಗಿದೆ. ವಿವಿಧ ಹಂತಗಳಲ್ಲಿ ಬೆಳೆ ಕಟಾವು ಆಧಾರದ ಮೇರೆಗೆ ವಿಮೆ ಪರಿಹಾರ ಪಾವತಿ ಬಾಕಿ ಇರುವ ರೈತರ ಅರ್ಜಿ ಪರಿಶೀಲಿಸಿ ಆದ್ಯತೆ ಮೇರೆಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ನಿರ್ದೇಶಕರು ಸೂಚಿಸಿದರು.

ನಿಗದಿತ ಅವಧಿಯಲ್ಲಿ ಅವಶ್ಯ ಡಿಎಪಿ ರಸಗೊಬ್ಬರ ಜತೆಯಲ್ಲಿ ಇತರ ರಸಗೊಬ್ಬರ ಪೂರೈಕೆಯಾಗುವಂತೆ ನೋಡಿಕೊಳ್ಳಲಾಗುವುದು. ಅಧಿಕಾರಿಗಳು ಈ ಭಾಗದ ರೈತರ ಸಮಸ್ಯೆಗೆ ನಿರ್ದಿಷ್ಟ ಸಮಯದಲ್ಲಿ ಸೂಕ್ತ ಪರಿಹಾರ ಒದಗಿಸಬೇಕು.
| ಡಾ.ಉಮೇಶ ಜಾಧವ್, ಸಂಸದ

ಮುಂಗಾರು ಬಿತ್ತನೆ ಗುರಿ (ಹೆಕ್ಟೇರ್​ನಲ್ಲಿ)
ಬೆಳೆ ಜಮೀನು

ತೊಗರಿ 5.52 ಲಕ್ಷ
ಉದ್ದು 0.324 ಲಕ್ಷ
ಹೆಸರು 0.522 ಲಕ್ಷ
ಹತ್ತಿ 0.634 ಲಕ್ಷ
ಕಬ್ಬು 0.29 ಲಕ್ಷ
ಒಟ್ಟು 7.84 ಲಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net