

ಶಿರಹಟ್ಟಿ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣ ಸಂಪೂರ್ಣ ಜಲಾವೃತಗೊಂಡಿದ್ದರಿಂದ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜ ಒಯ್ಯಲು ಬಂದ ರೈತರು ಪರದಾಡುವಂತಾಯಿತು. ನಾಲ್ಕೈದು ದಿನಗಳಿಂದ ಕೊಂಚ ಬಿಡುವು ನೀಡಿದ್ದ ಮಳೆ ಸೋಮವಾರ, ಮಂಗಳವಾರ ಸಂಜೆ 1 ತಾಸು ಸುರಿಯಿತು. ಹಬ್ಬು ಶೇಂಗಾ ಹರಗಿರುವ ಕೆಲ ರೈತರು ಆತಂಕದಲ್ಲಿದ್ದಾರೆ. ಹೀಗೆ ಮಳೆ ಸುರಿದರೆ ಶೇಂಗಾ ಹೊಟ್ಟು ಕೊಳೆತು ಭೂಮಿ ಪಾಲಾಗುತ್ತದೆ ಎಂಬ ಚಿಂತೆ ಕಾಡತೊಡಗಿದೆ. ಮತ್ತೊಂದೆಡೆ ಅಳಿದುಳಿದ ಉಳ್ಳಾಗಡ್ಡಿ, ಹತ್ತಿ, ಗೋವೀನಜೋಳ ರಕ್ಷಿಸಲು ಹರಸಾಹಸ ಪಡಬೇಕಾಗಿದೆ.