ಬೀಚ್‌ನಲ್ಲಿ ಹಾಡಲು ಹೋದ ಯುವಕನ ಸಾವು

ಬೀಚ್‌ನಲ್ಲಿ ಹಾಡಲು ಹೋದ ಯುವಕನ ಸಾವು
Published on


ಚನ್ನರಾಯಪಟ್ಟಣ: ಸ್ನೇಹಿತರೊಂದಿಗೆ ಪ್ರವಾಸ(ಟ್ರಿಪ್) ತೆರಳಿದ್ದ ಯುವಕ ಗೋವಾದ ಬೀಚ್‌ವೊಂದರಲ್ಲಿ ಹಾಡುತಿದ್ದ ವೇಳೆ ಅಲೆಯಲ್ಲಿ ಸಿಲುಕಿ ಮೃತಪಟ್ಟಿದ್ದಾನೆ.


ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ ಕರಿಕ್ಯಾತನಹಳ್ಳಿ ಗ್ರಾಮದ ಕುಮಾರ್ ಎಂಬವರ ಮಗ ಸಂಜಯ್ ಕುಮಾರ್(20) ಮೃತ ಯುವಕ.


ಘಟನೆಯ ವಿವರ: ಸಂಜಯ್ ಕುಮಾರ್ ಸೇರಿದಂತೆ ಕರಿಕ್ಯಾತನಹಳ್ಳಿ ಗ್ರಾಮದ ಸುಮಾರು 12 ಮಂದಿ ಯುವಕರು ಕಳೆದ ಗುರುವಾರ ಟಿಟಿ ವಾಹನವನ್ನು ಬಾಡಿಗೆಗೆ ಮಾಡಿಕೊಂಡು ಗೋವಾ ಟ್ರಿಪ್ ತೆರಳಿದ್ದರು.
ಎರಡು ದಿನಗಳ ಕಾಲ ಬಹುತೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವೀಕ್ಷಿಸಿದ ಯುವಕರ ತಂಡ ಶನಿವಾರ ಗೋವಾ ಸೇರಿದೆ. ಸಂಜೆ 4.30 ರಲ್ಲಿ ಗೋವಾದ ಬಾಗಾ ಬೀಚ್‌ಗೆ ಎಲ್ಲರೂ ತೆರಳಿ ನೀರಿಗಿಳಿದು ಸಂಭ್ರಮಿಸುತಿದ್ದರು.
ಅದೇ ವೇಳೆ ದೊಡ್ಡದೊಂದು ಅಲೆ ಬಂದು ಅಪ್ಪಳಿಸಿದ್ದು ಆರು ಮಂದಿ ಯುವಕರು ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಈಜುಗಾರರು ಐವರನ್ನು ರಕ್ಷಿಸಿ ದಡಕ್ಕೆ ಎಳೆ ತಂದಿದ್ದಾರೆ. ಆದರೆ ಸಂಜಯ್ ಕುಮಾರ್ ಮಾತ್ರ ಪತ್ತೆಯಾಗಲಿಲ್ಲ.


ಇದರಿಂದ ಉಳಿದವರು ಗಾಬರಿಗೊಂಡಿದ್ದು ಹುಡುಕಲು ಮುಂದಾಗಿದ್ದಾರೆ. ಅಷ್ಟರಲ್ಲಿ 5 ರಿಂದ 10 ನಿಮಿಷದ ಬಳಿಕ ಅಲೆಯಲ್ಲಿ ಸಂಜಯ್ ಕುಮಾರ್ ದೇಹ ದಡಕ್ಕೆ ಬಂದಿದೆ. ಹತ್ತಿರ ಹೋಗಿ ನೋಡುವಷ್ಟರಲ್ಲಿ ಆತ ಆಗಲೇ ಮೃತಪಟ್ಟಿರುವುದು ತಿಳಿದುಬಂದಿದೆ.


ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಗೋವಾ ಸರ್ಕಾರಿ ಮೆಡಿಕಲ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಸಾಗಿಸಲಾಗಿದೆ. ವಿಷಯ ತಿಳಿಯುತಿದ್ದಂತೆಯೇ ಆತನ ತಂದೆ ಹಾಗೂ ಸಂಬಂದಿಕರು ಇಲ್ಲಿಂದ ಗೋವಾಕ್ಕೆ ಭಾನುವಾರ ತೆರಳಿ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ.


ಭಾನುವಾರ ರಜೆಯಾಗಿದ್ದರಿಂದ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ಸುಮಾರಿಗೆ ಸಂಜಯ್ ಕುಮಾರ್ ಮೃತ ದೇಹವನ್ನು ಸಂಬಂದಿಕರಿಗೆ ಹಸ್ತಾಂತರಿಸಲಾಗಿದ್ದು ಗೋವಾದಿಂದ ಸ್ವಗ್ರಾಮಕ್ಕೆ ಆಗಮಿಸುತಿದ್ದಂತೆಯೇ ಅಂತ್ಯಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.


ಗೋವಾದ ಪಣಜಿ ವ್ಯಾಪ್ತಿಯ ಕಲ್‌ಕುಂಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net