

ಮೈಸೂರು: ನಾನು ಎಲ್ಲ ಕಲಿತ್ತಿದ್ದೇನೆ, ನಾನು ಸಾಧನೆ ಮಾಡಿದ್ದೇನೆ ಎಂದು ಬೀಗಿದರೆ ಬೆಳವಣಿಗೆ ಹೊಂದಲು ಆಗುವುದಿಲ್ಲ ಎಂದು ನಗರಪಾಲಿಕೆ ಆಯುಕ್ತ ತನ್ವೀರ್ ಆಸಿಫ್ ಶೇಖ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಅನಾಥಾಲಯದಲ್ಲಿ ತಾತಯ್ಯ ಸ್ಮಾರಕ ಉಪನ್ಯಾಸ ಮಾಲೆಯಲ್ಲಿ ಭಾನುವಾರ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳು- ಭೇದಿಸುವ ಸಲಕರಣೆಗಳು, ಸಾಧನೆಗಳು-ಗುರಿ ಮತ್ತು ಪೂರ್ವ ಸಿದ್ಧತೆಗಳ ಕೆಲವು ಆಯಾಮಗಳು ಕುರಿತು ಉಪನ್ಯಾಸ ನೀಡಿದರು.
ಪ್ರತಿಯೊಂದು ವಿಚಾರಗಳನ್ನು ನಾನು ತಿಳಿದಿರುವೆ, ನಾನು ಜ್ಞಾನಿ ಎಂಬ ಭ್ರಮೆ ಬೇಡ. ನಾನು ಎಲ್ಲ ಕಲಿತ್ತಿದ್ದೇನೆ, ಸಾಧನೆ ಮಾಡಿದ್ದೇನೆ ಎಂದು ಬೀಗಿದರೆ ಬೆಳವಣಿಗೆ ಹೊಂದಲು ಆಗುವುದಿಲ್ಲ. ಇನ್ನು ಬಹಳಷ್ಟು ಕಲಿಯುವುದೂ ಇದೆ ಎಂದು ಜ್ಞಾನಾರ್ಜನೆ ಮಾಡಿದರೆ ಯಶಸ್ವಿಯಾಗಬಹುದು ಎಂದು ತಿಳಿ ಹೇಳಿದರು.
ಕೇಂದ್ರ ಲೋಕಸೇವಾ ಆಯೋಗದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಲು ಗುರಿ, ಉದ್ದೇಶ ಮತ್ತು ಕೌಶಲ ಬಹಳ ಪ್ರಮುಖವಾಗಿರುತ್ತದೆ. ಪರೀಕ್ಷೆಗಾಗಿ ಎಷ್ಟೇ ಓದಿ, ಬರೆದರೂ ಜ್ಞಾನ ಕಡಿಮೆ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾನು ಎಷ್ಟೇ ಓದಿ ಜ್ಞಾನವಂತನಾದರೂ ಕಡಿಮೆ. ನನಗೇನು ಗೊತ್ತಿಲ್ಲ ಎಂಬ ಮನೋಭಾವ ಇದ್ದರೆ ಗುರಿ ಸಾಧಿಸಬಹುದು ಎಂದರು.
ಯಾವ ಪುಸ್ತಕ ಓದಬೇಕು, ಏನನ್ನು ಓದಬೇಕು ಎಂಬ ಅರಿವು ಇರಬೇಕು. ಪ್ರಮುಖ ಪತ್ರಿಕೆ, ಪುಸ್ತಕಗಳನ್ನು ಮುಖ ಪುಟದಿಂದ ಕೊನೆ ಪುಟದವರೆಗೆ ಓದಬೇಕು. ಆ ಪುಸ್ತಕದ ವಿಚಾರ ತಿಳಿದುಕೊಳ್ಳಬೇಕು. ಇದು ಬಿಟ್ಟು ಕಾಟಾಚಾರಕ್ಕೆ ಪುಸ್ತಕ ಓದಬಾರದು. ಶ್ರಮವಹಿಸಿ ಓದಿದರೆ ಕೇಂದ್ರ ಲೋಕಸೇವಾ ಆಯೋಗಕ್ಕೆ ಆಯ್ಕೆಯಾಗಬಹುದು ಎಂದು ಹೇಳಿದರು.
ವಿದ್ಯಾರ್ಥಿಗಳಾದವರಿಗೆ ವಿಶ್ವಕ್ಕೆ ಏನಾದರೂ ಕೊಡುಗೆ ನೀಡುವ ನಿಟ್ಟಿನಲ್ಲಿ ಆವಿಷ್ಕಾರ ಮಾಡಬೇಕು. ಹೊಸತನ್ನು ಸೃಷ್ಟಿ ಮಾಡುವ ಚಿಂತನೆ, ಗುರಿ, ಕಾತುರ ಇರಬೇಕು. ಇದನ್ನು ಸಾಕಾರಗೊಳಿಸಲು ಪರಿಣಿತರ ಸಲಹೆ ಮಾರ್ಗದರ್ಶ ಪಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಅನಾಥಾಲಯದ ಅಧ್ಯಕ್ಷ ಸಿ.ವಿ.ಗೋಪಿನಾಥ್ ಮಾತನಾಡಿ, ಪ್ರತಿಯೊಬ್ಬರೂ ಮಾನವೀಯ ಗುಣ ಮೈಗೂಡಿಸಿಕೊಳ್ಳಬೇಕು. ಇದರಿಂದ ಜ್ಞಾನವೃದ್ಧಿಯಾಗುತ್ತದೆ. ನಾವು ಕಲಿತ ಜ್ಞಾನವನ್ನು ಇತರರಿಗೂ ಧಾರೆ ಎರೆಯಬೇಕು. ನಾವು ಸಾಗುವ ಗುರಿಯಲ್ಲಿ ವೈಫಲ್ಯತೆ ಹೊಂದಿದರೆ ಧೃತಿಗೆಡಬಾರದು. ಎದುರಿಗಿರುವ ಸವಾಲನ್ನು ಸಮರ್ಥವಾಗಿ ಎದುರಿಸಿ ಗುರಿ ಸಾಧಿಸಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಹೇಳಿದರು.
ನಾವು ಓದುವ ಕಾಲದಲ್ಲಿ ಫೋನ್, ಟಿವಿ, ಮೊಬೈಲ್ ಸೇರಿದಂತೆ ಈಗಿರುವ ಆಧುನಿಕವಾದ ಯಾವ ಸಾಧನವೂ ಇರಲಿಲ್ಲ. ಆದರೂ ನಮ್ಮ ಕಾಲದಲ್ಲಿ ಬಹಳಷ್ಟು ಜನರು ಪರಿಣಿತಿ ಹೊಂದಿದ್ದರು. ಈಗ ಎಲ್ಲ ಸೌಲಭ್ಯಗಳು ಇದ್ದರೂ, ಗಮನ ಬೇರೆಗೆ ಹೋಗುತ್ತಿದೆ. ಹಾಗಾಗಿ ಏಕಾಗ್ರತೆಯಿಂದ ಗುರಿ ಸಾಧಿಸಬೇಕು ಎಂದು ಹೇಳಿದರು.
ಅನಾಥಾಲಯದ ಕಾರ್ಯದರ್ಶಿ ಎಚ್.ಅಶ್ವತ್ಥ್ ನಾರಾಯಣ್, ಜಂಟಿ ನಿರ್ದೇಶಕ ವೆಂಕಟೇಶ್ ಆರ್.ಪದಕಿ, ನಿರ್ದೇಶಕರಾದ ಚಿತ್ಕಲ, ನಾಗಮಣಿ ಸಂಪತ್ ಇದ್ದರು.