

ಹಗರಿಬೊಮ್ಮನಹಳ್ಳಿ: ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ. ಜನರು ಮರ-ಗಿಡಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಹಳ್ಳಿಕಟ್ಟೆ ಮೇಲೆ ಮಾತನಾಡುತ್ತಾ ಕುಳಿತುಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.
ತಾಲೂಕಿನ ಸೊನ್ನ ಗ್ರಾಮದಲ್ಲಿ ಊರ ಮುಂದೆ ಆಲ ಮತ್ತು ಬೇವಿನ ಮರ ಜೋಡಿಯಾಗಿ ಬೃಹತ್ತಾಗಿ ಬೆಳೆದಿವೆ. ಸುಮಾರು 100 ವರ್ಷಗಳಷ್ಟು ಹಳೆಯದಾದ ಈ ಜೋಡಿಮರಗಳ ಸುತ್ತ ಇದ್ದ ಕಾಡುಗಲ್ಲುಗಳನ್ನು ತೆಗೆದು ಟೈಲ್ಸ್ ಅಳವಡಿಸಿ ಕಟ್ಟೆ ನಿರ್ಮಿಸಲಾಗಿದೆ. ಇದೀಗ ಗ್ರಾಮಸ್ಥರ ವಿಶ್ರಾಂತಿಯ ತಾಣವಾಗಿ ಮಾರ್ಪಾಡಾಗಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಜನರ ಅಚ್ಚುಮೆಚ್ಚಿನ ತಾಣವಾಗಿದೆ.