

ಚಾಮರಾಜನಗರ: ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಕೆಎಸ್‌ಆರ್‌ಟಿಸಿ ಬಸ್‌ಗಾಗಿ ಬಿಸಿಲಿನಲ್ಲೇ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹೊರ ವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಬೋಧನ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಿತ್ಯವೂ 2-3 ಬಸ್ ಸಂಚಾರ ಮಾಡುತ್ತವೆ. ಪ್ರತಿದಿನವೂ ಸಾವಿರಾರು ಜನರು ಈ ಸಾರಿಗೆ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ರೋಗಿಗಳು, ಸಂಬಂಧಿಕರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸೇವೆಯನ್ನೇ ಅವಲಂಬಿಸಿದ್ದಾರೆ.
ಸಿಮ್ಸ್ ಆಸ್ಪತ್ರೆಯ ಮುಂಭಾಗದ ರಸ್ತೆಯ ಸಮೀಪದಲ್ಲಿ ಬಸ್ ನಿಲ್ದಾಣಕ್ಕೆ ಜಾಗವನ್ನು ಗುರುತಿಸಿ, ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಎಂಬ ಬೋರ್ಡ್‌ಕೂಡ ಅಳವಡಿಸಲಾಗಿದೆ. ಆದರೇ ಈವರೆಗೂ ಸೂಕ್ತವಾದ ಬಸ್ ತಂಗುದಾಣವನ್ನು ನಿರ್ಮಾಣ ಮಾಡದೇ ಸಾರ್ವಜನಿಕರು ಉರಿ ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಬರುವ ರೋಗಿಗಳು ಮತ್ತು ಅವರ ಸಂಬಂಧಿಕರು ಬಸ್ ನಿಲ್ದಾಣದಿಂದ ದೂರದಲ್ಲಿರುವ ಹೋಟೆಲ್, ಮರದ ನೆರಳಿನಲ್ಲಿ ನಿಂತುಕೊಂಡು ಬಸ್ ಬಂದ ಬಳಿಕ ಓಡಿ ಹೋಗಿ ಬಸ್ ಹತ್ತುವಂತಹ ಪರಿಸ್ಥಿತಿ ಇದೆ. ಇತ್ತೀಚೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದ್ದು, ಹಲವಾರು ರೋಗಿಗಳು ಮತ್ತು ಸಾರ್ವಜನಿಕರು ಅಸ್ವಸ್ಥರಾಗಿರುವಂತಹ ಉದಾಹರಣೆಯೂ ಇದೆ. ಈ ನಿಟ್ಟಿನಲ್ಲಿ ಸಿಮ್ಸ್ ಆಸ್ಪತ್ರೆಯ ಮುಂಭಾಗ ಸೂಕ್ತವಾದ ಬಸ್ ತಂಗುದಾಣವನ್ನು ನಿರ್ಮಾಣ ಮಾಡಿ, ಸಾರ್ವಜನಿಕರಿಗೆ ನೆರಳಿನ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ರೋಗಿಗಳಿಗೆ ಸಮಸ್ಯೆ:
ಕೆಎಸ್‌ಆರ್‌ಟಿಸಿ ಬಸ್ ಅನ್ನು ವಿದ್ಯಾರ್ಥಿಗಳು ಹಾಗೂ ರೋಗಿಗಳು ಹೆಚ್ಚಾಗಿ ಅವಲಂಬಿಸಿದ್ದಾರೆ. ದೂರದ ಊರುಗಳಿಂದ ಬರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳು ಸಾರಿಗೆ ಬಸ್ ಸೇವೆಯನ್ನೇ ಅವಲಂಬಿಸಿದ್ದಾರೆ. ಅವರು ಸಿಮ್ಸ್ ಆಸ್ಪತ್ರೆಯಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೋಗಬೇಕಾದರೇ ಈಗೇ ಬಿಸಿಲಿನಲ್ಲೇ ಕಾಯುವಂತಹ ಪರಿಸ್ಥಿತಿ ಇದೆ. ರೋಗಿಗಳ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ನಿತ್ಯವೂ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ. ಈಗಾಗಲೇ ಕೆಎಸ್‌ಆರ್‌ಟಿಸಿ ವತಿಯಿಂದ ರಸ್ತೆಯ ಸಮೀಪದಲ್ಲೇ ಜಾಗವನ್ನು ಗುರುತಿಸಿ ಸ್ವಚ್ಛಗೊಳಿಸಿದ್ದು, ಆ ಸ್ಥಳದಲ್ಲಿ ಒಂದು ಸುಸಜ್ಜಿತ ಬಸ್ ತಂಗುದಾಣವನ್ನು ನಿರ್ಮಾಣ ಮಾಡಿದರೇ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆಎಸ್‌ಆರ್‌ಟಿಸಿ ವತಿಯಿಂದ ಪತ್ರ:
ಸಿಮ್ಸ್ ಆಸ್ಪತ್ರೆಯ ಮುಂಭಾಗ ಸೂಕ್ತ ಬಸ್ ತಂಗುದಾಣ ನಿರ್ಮಾಣ ಮಾಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಿಮ್ಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೇ ರಸ್ತೆ ಸಮೀಪದಲ್ಲಿ ಬಸ್ ತಂಗುದಾಣ ಮಾಡಬೇಕಾಗಿರುವುದರಿಂದ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಮ್ಸ್ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ನಿಲ್ದಾಣ ಮಾಡಲು ಬರುವುದಿಲ್ಲ ಎಂಬುದು ಇವರ ವಾದವಾದರೇ, ಈ ಜಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಸಿಮ್ಸ್ ಅಧಿಕಾರಿಗಳ ಮಾತಾಗಿದೆ. ಈ ನಡುವೆ ಸಾರ್ವಜನಿಕರು ಬಿಸಲಿನಲ್ಲಿ ನರಳುವಂತಾಗಿದೆ. ಸ್ಥಳೀಯ ಶಾಸಕರು ಇತ್ತ ಗಮನಹರಿಸಿ ಶೀಘ್ರವಾಗಿ ಬಸ್ ತಂಗುದಾಣವನ್ನು ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಶಾಸಕರ ಸ್ಪಂದನೆ:
ಸಿಮ್ಸ್ ಆಸ್ಪತ್ರೆಯ ಮುಂಭಾಗ ಸೂಕ್ತವಾದ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡುವ ಸಂಬಂಧ ವಿಜಯವಾಣಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರನ್ನು ಸಂಪರ್ಕಿಸಿದಾಗ ಅಗತ್ಯವಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮವಹಿಸುತ್ತೇನೆ ಎಂದು ಸ್ಪಂದಿಸಿದರು. ಗುಂಡ್ಲುಪೇಟೆ ಮತ್ತು ಚಾಮರಾಜನಗರ ಮುಖ್ಯರಸ್ತೆಯಲ್ಲಿ ತಂಗುದಾಣ ಇರುವುದು ನನ್ನ ಗಮನಕ್ಕೆ ಬಂದಿತ್ತು. ಆದರೇ ಇಲ್ಲಿ ಈ ತರಹ ಸಮಸ್ಯೆಯಾಗುತ್ತಿದೆ ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಸಿಮ್ಸ್ ಆಸ್ಪತ್ರೆಯ ಮುಂಭಾಗ ಸುಸಜ್ಜಿತವಾದ ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮವಹಿಸುತ್ತೇನೆ ಎಂದು ತಿಳಿಸಿದರು.
ಸಿಮ್ಸ್ ಆಸ್ಪತ್ರೆಗೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಹಾಗೂ ಸಾರ್ವಜನಿಕರು ಸಾರಿಗೆ ಬಸ್ ಮೂಲಕ ಸಂಚಾರ ಮಾಡುತ್ತಾರೆ. ಅಗತ್ಯವಾದ ಬಸ್ ತಂಗುದಾಣವಿಲ್ಲದೇ ಸಾರ್ವಜನಿಕರು ಬಿಸಲಿನಲ್ಲಿ ಬಸವಳಿಯುತ್ತಿದ್ದಾರೆ. ಕೂಡಲೇ ಜನಪ್ರತಿನಿಧಿಗಳು ಒಂದು ಬಸ್ ತಂಗುದಾಣವನ್ನು ನಿರ್ಮಾಣ ಮಾಡಬೇಕು.
-ಮಂಜು, ಸಮಾಜಿಕ ಕಾರ್ಯಕರ್ತ, ಚಾಮರಾಜನಗರ
ಈಗಾಗಲೇ ಅಗತ್ಯ ಬಸ್ ಸೌಲಭ್ಯವನ್ನು ಸಿಮ್ಸ್‌ಗೆ ಕಲ್ಪಿಸುತ್ತಿದ್ದೇವೆ. ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ತಂಗುದಾಣ ನಿರ್ಮಾಣ ಮಾಡಲು ಬರುವುದಿಲ್ಲ. ಸಿಮ್ಸ್ ಅಧಿಕಾರಿಗಳಿಗೆ ಬಸ್ ತಂಗುದಾಣ ನಿರ್ಮಾಣ ಮಾಡುವಂತೆ ಪತ್ರ ಬರೆಯಲಾಗಿದೆ.
-ಅಶೋಕ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಚಾಮರಾಜನಗರ
ಬಸ್ ರಸ್ತೆಯಲ್ಲಿ ನಿಲ್ಲುವುದರಿಂದ ರಸ್ತೆಯ ಸಮೀಪದಲ್ಲೇ ತಂಗುದಾಣ ನಿರ್ಮಾಣಕ್ಕೆ ಜಾಗ ಮಾಡಲಾಗಿದೆ. ಆದರೇ ಅದು ಸಿಮ್ಸ್ ವ್ಯಾಪ್ತಿಗೆ ಬರುವುದಿಲ್ಲ. ಆಗಾಗಿ ನಾವು ಆ ಸ್ಥಳದಲ್ಲಿ ಬಸ್ ತಂಗುದಾಣ ಮಾಡಲು ಬರುವುದಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು.
-ಡಾ.ಮಂಜುನಾಥ್, ಡೀನ್ ಮತ್ತು ನಿರ್ದೇಶಕ, ಸಿಮ್ಸ್, ಚಾಮರಾಜನಗರ