

ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ರಾಜ್ಯದ ವಿವಿಧೆಡೆಗಳಿಂದ ಬರುತ್ತಿದ್ದ ಬಿಸಿಯೂಟ ಕಾರ್ಯಕರ್ತೆಯರನ್ನು ತುಮಕೂರಿನಲ್ಲಿಯೇ ಪೊಲೀಸರು ತಡೆದರು.
ಉತ್ತರ ಕರ್ನಾಟಕದ ಬಾಗಲಕೋಟೆ, ಕಲಬುರಗಿ, ತೇರದಾಳ, ಜಮಖಂಡಿ ಮತ್ತಿತರರ ಭಾಗದಿಂದ ಬೆಂಗಳೂರಿಗೆ ತೆರಳಲು ಭಾನುವಾರ ರಾತ್ರಿಯೇ ಮಠಕ್ಕೆ ಬಂದಿದ್ದ ಕಾರ್ಯಕರ್ತೆಯರನ್ನು ಸೋಮವಾರ ಬೆಳಗ್ಗೆ ವಶಕ್ಕೆ ಪಡೆದು ಪ್ರಯಾಣ ಮುಂದುವರಿಸದಂತೆ ತಡೆದರು. ಮಠದಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಾಕಷ್ಟು ಕಾರ್ಯಕರ್ತೆಯರು ಮನೆಯಿಂದ ತಂದಿದ್ದ ಬುತ್ತಿ ಸೇವಿಸಿ ವಾಪಸಾದರು. ತುಮಕೂರು ಸೇರಿ ತಾಲೂಕು ಕೇಂದ್ರಗಳಿಂದ ಬೆಂಗಳೂರಿಗೆ ತೆರಳಲು ಸಿದ್ಧರಾಗಿದ್ದ ನೂರಾರು ಕಾರ್ಯಕರ್ತೆಯರನ್ನು ಮಾರ್ಗಮಧ್ಯೆಯೇ ವಶಕ್ಕೆ ಪಡೆದರು.
ರೈಲ್ವೆ ನಿಲ್ದಾಣದಲ್ಲೇ ತಡೆ: ತಿಪಟೂರು ನಗರದಿಂದ ಬೆಂಗಳೂರು ಪ್ರತಿಭಟನೆಯಲ್ಲಿ ಭಾಗವಹಿಸಲು ಲಕ್ಷ್ಮೀದೇವಿ ನೇತೃತ್ವದಲ್ಲಿ ಹೊರಟಿದ್ದ ನೂರಾರು ಬಿಸಿಯೂಟ ಕಾರ್ಯಕರ್ತೆಯರನ್ನು ರೈಲು ನಿಲ್ದಾಣದಲ್ಲಿ ಪೊಲೀಸರು ತಡೆದರು. ಮಹಿಳೆಯರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದು ನಂತರ ಬಿಡುಗಡೆಗೊಳಿಸಿದರು. ನಮ್ಮ ಬೇಡಿಕೆಗಳನ್ನು ಈಡೇರಿಸಲಾಗದ ಸರ್ಕಾರ ಪ್ರತಿಭಟನೆ ತಡೆಯಲು ಪೊಲೀಸರನ್ನು ಬಳಸಿಕೊಂಡಿದೆ ಎಂದು ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಪಾವಗಡದಲ್ಲಿ ಹೋರಾಟ ಸ್ಥಗಿತ
ಪಾವಗಡ: ಬೆಂಗಳೂರಿನಲ್ಲಿ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸೋಮವಾರ ತೆರಳುತ್ತಿದ್ದ ತಾಲೂಕಿನ ನೌಕರರನ್ನು ಪಾವಗಡ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಸಂಘದ ಪೊನ್ನಸಮುದ್ರ ಕೆಂಚಮ್ಮ ಮಾತನಾಡಿ, 16 ವರ್ಷದಿಂದ ನಾವು ಕಡಿಮೆ ಗೌರವಧನ ಪಡೆದು ಸೇವೆ ಸಲ್ಲಿಸುತ್ತಿದ್ದೇವೆ. ಅಲ್ಲದೆ, ಈ ಬಗ್ಗೆ ಅನೇಕ ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಸೋಮವಾರ ಬೆಂಗಳೂರಿನ ಹೋರಾಟಕ್ಕೆ ತೆರಳುತ್ತಿದ್ದಾಗ ನಮ್ಮನ್ನು ಪೊಲೀಸರು ಬಂಧಿಸಿದ್ದಾರೆ. ಇದು ಸರಿಯಲ್ಲ ನಮ್ಮ ಬೇಡಿಕೆ ಈಡೇರಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದರು. ಎಸ್‌ಪಿ ಸೂಚನೆ ಮೇರೆಗೆ ನೌಕರರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ ಎಂದು ಎಸ್‌ಐ ರಾಘವೇಂದ್ರ ತಿಳಿಸಿದರು.
ಕುಣಿಗಲ್ ತಾಲೂಕು ಅಧ್ಯಕ್ಷೆಗೆ ಗೃಹ ದಿಗ್ಬಂಧನ
ಕುಣಿಗಲ್: ಬೆಂಗಳೂರಿನ ಪ್ರತಿಭಟನಾ ರ‌್ಯಾಲಿಗೆ ತಾಲೂಕಿನಿಂದ ಯಾವ ನೌಕರರು ಹೋಗದಂತೆ ಪೊಲೀಸರು ತಡೆದರು. ಬಿಸಿಯೂಟ ತಾಲೂಕು ಸಂಘದ ಅಧ್ಯಕ್ಷೆ ಸೇರಿ ಹಲವು ಕಾರ್ಯಕರ್ತರನ್ನು ಹಲವು ಗಂಟೆಗಳ ಕಾಲ ಮನೆಯಲ್ಲಿ ಹಾಗೂ ಪ್ರವಾಸಿ ಮಂದಿರದಲ್ಲಿ ದಿಗ್ಬಂಧನ ವಿಧಿಸಿ ಪೊಲೀಸ್ ಕಾವಲು ಹಾಕುವ ಮೂಲಕ ಕಾರ್ಯಕರ್ತೆಯರನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.
ಹೋರಾಟದ ಬೆಂಬಲ ಸೂಚಿಸಿ ತಾಲೂಕಿನಿಂದ 630ಕ್ಕೂ ಅಧಿಕ ಮಂದಿ ಬಿಸಿಯೂಟ ನೌಕರರು ಸೋಮವಾರ ಬೆಂಗಳೂರಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಬೆಳ್ಳಂಬೆಳಗ್ಗೆ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ವಾಸವಾಗಿರುವ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕೆ.ಎಂ.ಗಜವತಿ ಅವರ ಮನೆಗೆ ತೆರಳಿ ಪ್ರತಿಭಟನೆಗೆ ಹೋಗದಂತೆ ತಡೆದು ಮಧ್ಯಾಹ್ನ ಒಂದು ಗಂಟೆವರೆಗೆ ಅವರ ಮನೆಯಲ್ಲಿ ಪೊಲೀಸ್ ಕಾವಲು ಹಾಕಿದ್ದರಲ್ಲದೆ, ಬೆಂಗಳೂರಿಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದ 8ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಅವರನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಇರಿಸಿ, ನಂತರ ಬಿಡುಗಡೆಗೊಳಿಸಿದರು.
ಸರ್ಕಾರದ ಕ್ರಮಕ್ಕೆ ಖಂಡನೆ: 18 ವರ್ಷದಿಂದ ರಾಜ್ಯಾದ್ಯಂತ ಬಿಸಿಯೂಟ ನೌಕರರು ಕಡಿಮೆ ಸಂಬಳ ಪಡೆದು ಲಕ್ಷಾಂತರ ಶಾಲಾ ಮಕ್ಕಳಿಗೆ ಬಿಸಿಯೂಟ ಉಣ ಬಡಿಸಲಾಗುತ್ತಿದೆ. ಆದರೆ ನೌಕರರಿಗೆ ಸರ್ಕಾರದ ಭದ್ರತೆ ಇಲ್ಲ, ಸಂಬಳ ಸೇರಿ ಇತರೆ ಭತ್ಯೆಗಳು ಕಾಲಕಾಲಕ್ಕೆ ನೀಡುತ್ತಿಲ್ಲ, ಇದರಿಂದ ನೌಕರರ ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ಪೊಲೀಸರನ್ನು ಮುದಿಟ್ಟುಕೊಂಡು ವಿನಾಕಾರಣ ನೌಕರರನ್ನು ಮನೆ ಮತ್ತು ಪ್ರವಾಸಿ ಮಂದಿರದಲ್ಲಿ ದಿಗ್ಬಂಧನ ವಿಧಿಸಿದ್ದು ಖಂಡನೀಯ. ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘದ ತಾಲೂಕು ಅಧ್ಯಕ್ಷೆ ಕೆ.ಎಂ.ಗಜವತಿ ಹೇಳಿದರು.