

ಚಿತ್ರದುರ್ಗ: ತಾಲೂಕಿನ ಬೀರಾವರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅನೇಕ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬುಧವಾರ ದಾಖಲಿಸಲಾಯಿತು.
ಶಾಲೆಯಲ್ಲಿ ಎಂದಿನಂತೆ ಮಧ್ಯಾಹ್ನ 12.45ಕ್ಕೆ ಬಿಸಿಯೂಟ ನೀಡಲಾಗಿದೆ. ಸೇವಿಸಿದ 45 ವಿದ್ಯಾರ್ಥಿಗಳ ಪೈಕಿ ನಾಲ್ವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ನಂತರ ಇನ್ನಿತರೆ ಮಕ್ಕಳ ಆರೋಗ್ಯದಲ್ಲೂ ಏರು-ಪೇರು ಉಂಟಾದ ಪರಿಣಾಮ ತಕ್ಷಣ ಆಂಬ್ಯುಲೆನ್ಸ್‌ಗಳಲ್ಲಿ 38 ಮಂದಿಯನ್ನು ದಾಖಲು ಮಾಡಲಾಯಿತು.
62 ವಿದ್ಯಾರ್ಥಿಗಳು ದಾಖಲಾಗಿರುವ ಶಾಲೆಗೆ ಬುಧವಾರ 45 ಮಂದಿ ಹಾಜರಾಗಿದ್ದರು. ಊಟ ಸೇವನೆಯ ಒಂದೂವರೆ ಗಂಟೆ ಬಳಿಕ ಹಲವರು ಅಸ್ವಸ್ಥರಾದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ 38 ವಿದ್ಯಾರ್ಥಿಗಳು ಚೇತರಿಸಿಕೊಂಡಿದ್ದು, ಆರೋಗ್ಯ ಸ್ಥಿರವಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಪ್ರತ್ಯೇಕ ವಾರ್ಡ್‌ನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಹಾರ ಪದಾರ್ಥ, ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ ಮಾಹಿತಿ ನೀಡಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶ ವಿಜಯ್, ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಯೋಗ ಕ್ಷೇಮ ವಿಚಾರಿಸಿದರು. ಪೋಷಕರಿಗೆ ಧೈರ್ಯ ತುಂಬಿದರು. ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ನ್ಯಾಯಾಧೀಶರು ಸೂಚಿಸಿದರು.