ಬಿಸಿಯೂಟ ನೌಕರರ ಪ್ರತಿಭಟನೆ

12blrp1
Published on

ಬೇಲೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಎದುರು ಮಂಗಳವಾರ ಸಿಐಟಿಯು ನೇತೃತ್ವದಲ್ಲಿ ತಾಲೂಕು ಬಿಸಿಯೂಟ ನೌಕರರ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ಪ್ರತಿಭಟನೆ ನಡೆಸಿದರು.


ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಮಂಜುಳಮ್ಮ ಮಾತನಾಡಿ, ಸರ್ಕಾರ ಇತ್ತೀಚಿನ ದಿನದಲ್ಲಿ ಬಿಸಿಯೂಟ ನೌಕರರ ಮೇಲೆ ಯಾವುದೇ ಕರುಣೆ ಇಲ್ಲದೆ ನಡೆದುಕೊಳ್ಳುತ್ತಿದೆ. ಸೂಕ್ತ ವೇತನ ನೀಡುತ್ತಿಲ್ಲ. ಪಕ್ಕದ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಬಿಸಿಯೂಟ ನೌಕರರಿಗೆ ವೈಜ್ಞಾನಿಕ ವೇತನ ಮತ್ತು ಭದ್ರತೆ ನೀಡುವ ಮೂಲಕ ಅಲ್ಲಿನ ಸರ್ಕಾರ ನೌಕರರ ಹಿತ ಕಾಯುತ್ತಿದೆ. ಆದರೆ ರಾಜ್ಯದಲ್ಲಿ ಮಾತ್ರ ಬಿಸಿಯೂಟ ನೌಕರರ ಬಗ್ಗೆ ಮಲತಾಯಿ ಧೋರಣೆ ಇದೆೆ ಎಂದು ದೂರಿದರು.


ಕೇಂದ್ರ ಸರ್ಕಾರ ಬಿಸಿಯೂಟ ಸಿಬ್ಬಂದಿಗೆ ಕಳೆದ 10 ವರ್ಷಗಳಿಂದ ವೇತನ ಹೆಚ್ಚಿಸಿಲ್ಲ. ಕೋವಿಡ್ ಸಮಯದಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ ಆರ್ಥಿಕ ಪ್ಯಾಕೇಜ್‌ಗಳಿಂದಲೂ ನಮ್ಮನ್ನು ಹೊರಗಿಡಲಾಗಿದೆ. ಪ್ರತಿವರ್ಷ ನಮಗೆ ಜೂನ್‌ನಿಂದ ವೇತನ ನೀಡಬೇಕು. ಈಗ ಮೂರು ತಿಂಗಳಾದರೂ ಸಂಬಳ ಕೈಸೇರಿಲ್ಲ. ಬಾಕಿ ಉಳಿಸಿಕೊಂಡಿರುವ ಈ ಮೊತ್ತದ ಜತೆಗೆ ಏಪ್ರಿಲ್ ಮತ್ತು ಮೇ ತಿಂಗಳ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಿಸಿಯೂಟ ಯೋಜನೆಯನ್ನು ಬಲಪಡಿಸುವುದರ ಜತೆಗೆ ಈಗಿರುವ ಮಾದರಿಯನ್ನೇ ಮುಂದುವರಿಸಬೇಕು. ವಯಸ್ಸಿನ ನೆಪವೊಡ್ಡಿ ಯಾವುದೇ ಕಾರಣಕ್ಕೂ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಬಾರದು. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಅಡುಗೆ ಸಿಬ್ಬಂದಿ ನೇಮಿಸಬೇಕು. ನಿಗದಿತ 4 ಗಂಟೆಗಿಂತಲೂ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದು, ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4 ಗಂಟೆ ಬದಲಾಗಿ 6 ಗಂಟೆ ಎಂದು ನಮೂದಿಸಬೇಕು ಎಂದು ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ನೇತ್ರಾ, ಖಜಾಂಚಿ ಪುಷ್ಪಾ, ಗೌರವಾಧ್ಯಕ್ಷೆ ಇಂದಿರಮ್ಮ, ಸಿಬ್ಬಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net