

ಹನೂರು: ತಾಲೂಕಿನ ಪಳನಿಮೇಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಶಾಸಕ ಎಂ.ಆರ್ ಮಂಜುನಾಥ್ ಮಕ್ಕಳೊಂದಿಗೆ ಕುಳಿತು ಬಿಸಿಯೂಟ ಸೇವಿಸಿ ಗುಣಮಟ್ಟ ಪರಿಶೀಲಿಸಿದರು.
ಶಾಲೆಗೆ ಭೇಟಿ ನೀಡಿದ ಶಾಸಕರು ಅಡುಗೆ ಕೋಣೆಗೆ ತೆರಳಿ ಬಿಸಿಯೂಟ ತಯಾರಿಕೆಯನ್ನು ವೀಕ್ಷಿಸಿದರು. ರುಚಿ ಹಾಗೂ ಶುಚಿಯನ್ನು ಕಾಯ್ದುಗೊಳ್ಳುವುದರ ಜತೆಗೆ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು. ಬಳಿಕ ತರಗತಿ ಕೊಠಡಿಗೆ ತೆರಳಿ ಕಲಿಕೆಯ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದು ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಿ ಓದಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು. ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.
ಕಟ್ಟಡ ತೆರವುಗೊಳಿಸಿ:
ಪ್ರಗತಿಯಲ್ಲಿರುವ ಶೌಚಗೃಹ ಕಾಮಗಾರಿ ಸ್ಥಳಕ್ಕೆ ತೆರಳಿದ ಶಾಸಕರು ಕಾಮಗಾರಿಯನ್ನು ಪರಿಶೀಲಿಸಿದರು. ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರು. ಶಿಥಿಲಾವಸ್ಥೆಯಿಂದ ಕೂಡಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಪಿಡಬ್ಲುೃಡಿ ಅಧಿಕಾರಿಗಳಿಗೆ ಸೂಚಿಸಿದರು. ಹೊಸ ಕಟ್ಟಡ ನಿರ್ಮಿಸಿ ಕೊಡುವುದಾಗಿ ಶಿಕ್ಷಕರಿಗೆ ಭರವಸೆ ನೀಡಿದರು. ಇದೇ ವೇಳೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು. ಪಿಎಸಿಸಿ ನಿರ್ದೇಶಕ ಲಿಂಗೇಗೌಡ, ಮುಖಂಡರಾದ ವಿಜಯಕುಮಾರ್, ಮಹದೇವ, ಶಾಲಾ ಶಿಕ್ಷಕರು ಇತರರಿದ್ದರು.