ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬಿಸಿಎಂ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ
Published on

ಹಾಸನ: ನಗರದ ಡೇರಿ ಸರ್ಕಲ್‌ನಲ್ಲಿರುವ ಬಾಲಕಿಯರ ಬಿಸಿಎಂ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿನಿಲಯಕ್ಕೆ ಸೂಕ್ತ ಭದ್ರತೆ ನೀಡಬೇಕು ಹಾಗೂ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕಿ ಚೈತ್ರ, ಹಾಸ್ಟೆಲ್ ಆವರಣದಲ್ಲಿ ಇತ್ತೀಚಿಗೆ ನಡೆದಿರುವ ಘಟನೆಗಳು ನಿಲಯ ವಾಸಿಗಳನ್ನು ಬೆಚ್ಚಿ ಬೀಳಿಸಿದೆ.1 ತಿಂಗಳ ಅಂತರದಲ್ಲಿ 2 ಬಾರಿ ಅಪರಿಚಿತ ವ್ಯಕ್ತಿಗಳು ನಿಲಯದ ಒಳಗಡೆ ನುಗ್ಗಿದ್ದರು ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಂಡಿದ್ದಾರೆ.ಗಾಬರಿಗೊಂಡ ವಿದ್ಯಾರ್ಥಿಗಳು ನಿಲಯ ಪಾಲಕರು ಹಾಗೂ ತಾಲೂಕು ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ, ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ ಎಂದು ದೂರಿದರು.
ಅಪರಿಚಿತ ವ್ಯಕ್ತಿ ಹಾಸ್ಟೆಲ್ ಒಳಗೆ ನುಗ್ಗಿರುವುದು ಸಿಸಿಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಹೆಣ್ಣು ಮಕ್ಕಳಲ್ಲಿ ಆತಂಕ ಹುಟ್ಟಿಸಿದೆ. ಹಾಸ್ಟೆಲ್‌ನಲ್ಲಿರಲು ಹೆದರುತ್ತಿದ್ದಾರೆ. ಇಷ್ಟೆಲ್ಲಾ ಆದರೂ ಮಹಡಿಯ ಒಂದು ಭಾಗದಲ್ಲಿ ಕಂಬಿಗಳಿರುವ ಗೇಟ್ ಹಾಕಿಸಿರುವುದನ್ನು ಬಿಟ್ಟರೆ ಬಿಗಿ ಭದ್ರತಾ ಕ್ರಮ ತೆಗೆದುಕೊಂಡಿಲ್ಲ. ಇಲಾಖೆ ಅಧಿಕಾರಿಗಳು ಒಮ್ಮೆಯೂ ಬಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ನಿಲಯ ಪಾಲಕರಿಗೆ ವಿದ್ಯಾರ್ಥಿಗಳು ತಮ್ಮ ಭಯಹೇಳಿಕೊಂಡರೆ ಭಯ ಪಡುವವರು ಹಾಸ್ಟೆಲ್ ಬಿಟ್ಟು ಹೋಗಬಹುದು
ಎಂದು ಬೇಜವಾಬ್ದಾರಿ ಉತ್ತರಕೊಟ್ಟಿ ದ್ದಾರೆ ಎಂದು ಖಂಡಿಸಿದರು.
ಇನ್ನಾದರೂ ಹಾಸ್ಟೆಲ್‌ಗೆ ಸೂಕ್ತಭದ್ರತೆ ಒದಗಿಸಬೇಕು. ಸಮಸ್ಯೆ ಬಗೆಹರಿಯು ವವರೆಗೂ ಪೊಲೀಸ್ ಭದ್ರತೆ ಒದಗಿಸಬೇಕು. ಇಲ್ಲವೆ
ವಿದ್ಯಾರ್ಥಿನಿಯರನ್ನು ಬೇರೆ ಹಾಸ್ಟೆಲ್‌ಗೆ ಸ್ಥಳಾಂತರಿಸಬೇಕು, ಹಾಗೆಯೇ ಮೂಲಭೂತ ಸೌಕರ್ಯ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಕಾರ್ಯಕರ್ತರಾದ ಸುಷ್ಮಾ, ಸೌಮ್ಯ ಹಾಗೂ ವಿವಿಧ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net