

ಮಂಜುನಾಥ ತಿಮ್ಮಯ್ಯ ಮೈಸೂರು
ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಅನಗತ್ಯ ತಾತ್ಕಾಲಿಕ ಉದ್ಯೋಗಿಗಳೇ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ..!
ಈ ಅರೆಕಾಲಿಕ ಸಿಬ್ಬಂದಿಯನ್ನು ಇಟ್ಟುಕೊಳ್ಳುವಂತೆಯೂ ಇಲ್ಲ. ಕೆಲಸದಿಂದ ತೆಗೆದುಹಾಕುವಂತೆಯೂ ಇಲ್ಲ. ಇಂತಹ ತ್ರಿಶಂಕು ಸ್ಥಿತಿಯಲ್ಲಿ ಮೈವಿವಿ ಹೊಯ್ದಡುತ್ತಿದೆ.
ಈ ಕುರಿತು ಸ್ಪಷ್ಟ ನಿರ್ಧಾರವನ್ನು ರಾಜ್ಯ ಸರ್ಕಾರವೂ ತೆಗೆದುಕೊಳ್ಳುತ್ತಿಲ್ಲ. ಇದರ ಫಲವಾಗಿ ತಾತ್ಕಾಲಿಕ ಉದ್ಯೋಗಿಗಳನ್ನು ತರ್ಕಬದ್ಧಗೊಳಿಸಿ, ಹೆಚ್ಚುವರಿಯಾಗಿರುವ ತಾತ್ಕಾಲಿಕ ಉದ್ಯೋಗಿಯನ್ನು ಕಡಿತಗೊಳಿಸುವ ಕುರಿತು ಶಿಫಾರಸು ಮಾಡಿರುವ ಪ್ರೊ.ಅಂಬಳಿಕ ಹಿರಿಯಣ್ಣ ಸಮಿತಿಯ ವರದಿ ಸಹ ನನೆಗುದಿಗೆ ಬಿದ್ದಿದೆ. ಈ ವಿಳಂಬದಿಂದ ಈ ಸಂಬಳವನ್ನು ಭರಿಸುವುದೇ ವಿವಿಗೆ ದೊಡ್ಡ ಹೊರೆಯಾಗಿದೆ.
ಕಾಲ ಕಾಲಕ್ಕೆ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿ ಆಗಲಿಲ್ಲ. ಹೀಗಾಗಿ, ವಿವಿಯಲ್ಲಿ ಶೇ.70ರಷ್ಟು ಹುದ್ದೆಗಳು ಖಾಲಿ ಇವೆ. 1349 ಕಾಯಂ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 400 ಹುದ್ದೆಗಳಲ್ಲಿ ಕಾಯಂ ಬೋಧಕೇತರ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಬೋಧಕ, ಬೋಧಕೇತರ ಸೇರಿದಂತೆ 949 ಹುದ್ದೆಗಳು ಖಾಲಿ ಹೊಡೆಯುತ್ತಿವೆ. ಇದನ್ನು ಸರಿದೂಗಿಸಿಕೊಂಡು ಹೋಗಲು ಎಗ್ಗಿಲ್ಲದೇ ತಾತ್ಕಾಲಿಕ ಸಿಬ್ಬಂದಿಯನ್ನು ತುಂಬಿಕೊಳ್ಳಲಾಗಿದೆ. ಇದುವೇ ಸಮಸ್ಯೆಗೆ ಮೂಲ ಕಾರಣವಾಗಿದೆ.
ಸಿಬ್ಬಂದಿ ಕೊರತೆಯಿಂದಾಗಿ ತಾತ್ಕಾಲಿಕ ಸಿಬ್ಬಂದಿಗೆ ಮೊರೆ ಹೋಗಲಾಗಿದೆ. ಅವಶ್ಯಕತೆಗೆ ಅನುಗುಣವಾಗಿ ಲ್ಯಾಬ್, ತೋಟಗಾರಿಕೆ ವಿಭಾಗ, ಕಚೇರಿಯ ಸಿಬ್ಬಂದಿ, ಸಹಾಯಕರು, ಅಧ್ಯಯನ ಕೇಂದ್ರಗಳಲ್ಲಿ ಕ್ಷೇತ್ರ ಸಹಾಯಕರು, ಸೇವಕರು, ಪರಿಚಾರಕರನ್ನು ನೇಮಿಸಿಕೊಳ್ಳಲಾಗಿದೆ.
ಆದರೆ, ಅದರ ಸಂಖ್ಯೆಯನ್ನು ಮಿತಿಗೊಳಿಸಿಲ್ಲ. ಕ್ರಮಬದ್ಧವನ್ನೂ ಮಾಡಲಿಲ್ಲ. ಯಥೇಚ್ಛವಾಗಿ ಅರೆಕಾಲಿಕ ಸಿಬ್ಬಂದಿ ಭರ್ತಿಯಾಗಿದ್ದಾರೆ. ಇದರಿಂದ 1136 ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಇದರಲ್ಲಿ ಅರ್ಧದಷ್ಟು ಅನಗತ್ಯ ಸಿಬ್ಬಂದಿ.
ಹುದ್ದೆಗಳ ಸಂಖ್ಯೆಯನ್ನು ಮಿತಿಗೊಳಿಸಿ, ಹೆಚ್ಚುವರಿ ತಾತ್ಕಾಲಿಕ ಸಿಬ್ಬಂದಿ ಕಡಿತಗೊಳಿಸಲು ಮೈವಿವಿಗೆ ರಾಜ್ಯ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಆದೇಶಿಸಿತ್ತು.
ಆ ಪ್ರಕಾರ, ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕ ಹಿರಿಯಣ್ಣ ಅಧ್ಯಕ್ಷತೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ರಾಮು, ರಾಜ್ಯ ಲೆಕ್ಕಪತ್ರ ಇಲಾಖೆಯ ಜಂಟಿ ನಿಬಂಧಕ ರಾಮಚಂದ್ರಸ್ವಾಮಿ ಅವರನ್ನು ಒಳಗೊಂಡ ಸಮಿತಿಯನ್ನೂ ರಚಿಸಲಾಗಿತ್ತು. ಇದು ಅಧ್ಯಯನ ನಡೆಸಿ ವರದಿ ಸಹ ನೀಡಿದೆ.
ಅನಗತ್ಯ ಸಿಬ್ಬಂದಿ ತೆರವುಗೊಳಿಸಲು ಶಿಫಾರಸು ಮಾಡಿದೆ. ಈ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಗೂ ಕಳುಹಿಸಿಕೊಡಲಾಗಿದೆ. ಆದರೆ, ಆ ಕಡೆಯಿಂದ ಯಾವುದೇ ಸೂಚನೆ ಬಂದಿಲ್ಲ. ಇದು ವಿವಿಯನ್ನು ಅಸಹಾಯಕತೆಗೆ ತಳ್ಳಿದೆ.
2001ರಿಂದ ತಾತ್ಕಾಲಿಕ ಸಿಬ್ಬಂದಿಯನ್ನು ಬೇಕಾಬಿಟ್ಟಿಯಾಗಿ ನೇಮಕಾತಿ ಮಾಡಿಕೊಳ್ಳುವುದು ಶುರುವಾಗಿದೆ. ಇದು ಹೆಚ್ಚಾಗಿರುವುದು 2010ರ ನಂತರ. ಕಳೆದ 5-6 ವರ್ಷಗಳ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ತಾತ್ಕಾಲಿಕ ನೇಮಕಾತಿ ಪತ್ರವನ್ನು ನೀಡಲಾಗಿದೆ.
2021ರ ಬಳಿಕ ಇದು ಸ್ಥಗಿತಗೊಂಡಿದೆ. ದಶಕದಿಂದಲೂ ಈ ಹೊರೆ ವಿವಿಗೆ ಬಿದ್ದಿದೆ.
ಮೈವಿವಿ ವ್ಯಾಪ್ತಿಯಲ್ಲಿದ್ದ ಹಾಸನ, ಮಂಡ್ಯ, ಚಾಮರಾಜನಗರಗಳಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿದ್ದು, ಮೈವಿವಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾತ್ಕಾಲಿಕ, ಕಾಯಂ ಸಿಬ್ಬಂದಿ ಆಯಾ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳಲ್ಲೇ ಮುಂದುವರಿಸಲಾಗಿದೆ.
ಆದಾಗ್ಯೂ, ಮೈಸೂರು ವಿವಿಯಲ್ಲಿ 1,136 ತಾತ್ಕಾಲಿಕ ಸಿಬ್ಬಂದಿ ಇದ್ದಾರೆ. ಪ್ರತ್ಯೇಕ ವಿಶ್ವವಿದ್ಯಾಲಯ ರಚನೆಯಾಗದಿದ್ದರೆ ಈ ಸಿಬ್ಬಂದಿ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತಿತ್ತು.
ಅನಗತ್ಯ ಇರುವ ತಾತ್ಕಾಲಿಕ ಸಿಬ್ಬಂದಿ ತೆರವುಗೊಳಿಸಲು ಮೈಸೂರು ವಿಶ್ವವಿದ್ಯಾಲಯ ಮನಸ್ಸು ಮಾಡಿದೆ. ಆದರೆ, ಇದಕ್ಕೆ ಸರ್ಕಾರದ ಒಪ್ಪಿಗೆಯೇ ದೊರೆಯುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದು ಯಕ್ಷಪ್ರಶ್ನೆಯಾಗಿದೆ. ರಾಜಕಾರಣಿಗಳ ಶಿಫಾರಸಿನ ಮೇರೆಗೆ ಹೆಚ್ಚಿನ ಪ್ರಮಾಣದಲ್ಲಿ ತಾತ್ಕಾಲಿಕ ಸಿಬ್ಬಂದಿಯ ನೇಮಕಾತಿಯಾಗಿದೆ. ಇವರನ್ನು ಕೆಲಸದಿಂದ ತೆಗೆಯಲು ಮುಂದಾದರೆ ರಾಜಕೀಯ ಒತ್ತಡ ಹೇರುತ್ತಾರೆ. ಸರ್ಕಾರ ಸಹ ಏನು ಕ್ರಮ ವಹಿಸುತ್ತಿಲ್ಲ. ಹೀಗಾಗಿ, ಏನು ಮಾಡಲಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಕೆಲ ಅಧ್ಯಯನ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗಿಂತ ಬೋಧಕೇತರ ಸಿಬ್ಬಂದಿ ಸಂಖ್ಯೆಯೇ ಅಧಿಕವಾಗಿದ್ದು, ಈ ರೀತಿ ಅನಗತ್ಯ ಸಿಬ್ಬಂದಿ ಏಕೆ? ಎಂದು ವಿದ್ಯಾರ್ಥಿಗಳ, ಪ್ರಾಧ್ಯಾಪಕರ ಪ್ರಶ್ನೆಯಾಗಿದೆ. ತಾತ್ಕಾಲಿಕ ಮತ್ತು ಕಾಯಂ ಸಿಬ್ಬಂದಿ ನಡುವೆ ಸಮತೋಲ ಕಾಯ್ದುಕೊಳ್ಳಬೇಕಿತ್ತು. ಇತಿಮಿತಿಯಲ್ಲಿ ಈ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಿತ್ತು. ಅದು ಆಗಿಲ್ಲ. ಅದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮೈವಿವಿ ಅಧಿಕಾರಿಯೊಬ್ಬರು ತಿಳಿಸಿದರು.
ತಾತ್ಕಾಲಿಕ ಸಿಬ್ಬಂದಿಯ ವೇತನ ನೀಡಲು ತಿಂಗಳಿಗೆ 2.30 ಕೋಟಿ ರೂ. ಮತ್ತು ವರ್ಷಕ್ಕೆ 25 ಕೋಟಿ ರೂ. ವ್ಯಯಿಸಲಾಗುತ್ತಿದ್ದು, ಭತ್ಯೆ ಮೊದಲಾದ ವೆಚ್ಚ ಸೇರಿಸಿದರೆ 50 ಕೋಟಿ ರೂ.ಭರಿಸಬೇಕಿರುವುದು ದೊಡ್ಡ ಸಮಸ್ಯೆಯಾಗಿದೆ.
ವಿವಿ ಆಂತರಿಕ ಸಂಪನ್ಮೂಲದಿಂದ ಇದನ್ನು ಕೊಡಲಾಗುತ್ತಿದೆ. ಕಾಯಂ ಉದ್ಯೋಗಿಗಳ ವೇತನವನ್ನು ಸರ್ಕಾರವೇ ಪಾವತಿಸಿದರೂ ತಾತ್ಕಾಲಿಕ ನೌಕರರ ವೇತನಕ್ಕೆ ಸರ್ಕಾರದಿಂದ ಅನುದಾನ ಬರಲ್ಲ. ಸರ್ಕಾರದಿಂದ ಕೊಡುವ ಪಿಂಚಣಿ ಅನುದಾನದಲ್ಲೂ ವರ್ಷದಿಂದ ವರ್ಷಕ್ಕೆ ಕಡಿತವಾಗುತ್ತಿದೆ.
ಪ್ರತಿ ತಿಂಗಳು 1,852 ಸಿಬ್ಬಂದಿಗೆ ಪಿಂಚಣಿ ಕೊಡಬೇಕಿದ್ದು, ಸರ್ಕಾರದಿಂದ ಅನುದಾನ ವಿಳಂಬವಾದರೆ ಪಿಂಚಣಿ ಹಣದಿಂದಲೇ ಕೊಡಬೇಕಿದೆ. ಆದರೆ, ತಾತ್ಕಾಲಿಕ ನೌಕರರ ವೇತನವನ್ನು ವಿವಿ ಆದಾಯದ ಮೂಲದಿಂದಲೇ ಭರಿಸಬೇಕಿರುವುದರಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.
2024-25ನೇ ಸಾಲಿನಲ್ಲಿ 80.35 ಕೋಟಿ ರೂ. ವಿತ್ತ ಕೊರತೆಯನ್ನು ಮೈವಿವಿ ಎದುರಿಸುತ್ತಿದೆ.
ಪ್ರಸ್ತಕ ಸಾಲಿನಲ್ಲಿ 277.39 ಕೋಟಿ ರೂ. ನಿರೀಕ್ಷಿತ ಆದಾಯವಾಗಿದ್ದು, 357.74 ಕೋಟಿ ರೂ. ನಿರೀಕ್ಷಿತ ವೆಚ್ಚವಾಗಿದ್ದು, 80.35 ಕೋಟಿ ರೂ. ಕೊರತೆಯಾಗಿದೆ. 2022-23, 2023-24, 2024-25ನೇ ಸಾಲಿನಲ್ಲಿ ಸರ್ಕಾರದಿಂದ ಪಿಂಚಣಿ ಅನುದಾನವಾಗಿ ಕ್ರಮವಾಗಿ 56 ಕೋಟಿ ರೂ., 63 ಕೋಟಿ ರೂ., 70 ಕೋಟಿ ರೂ. ಕಡಿಮೆ ನೀಡಿದ್ದು, ಇದರಿಂದ ಪ್ರಸ್ತಕ ಸಾಲಿನಲ್ಲಿ 80.35 ಕೋಟಿ ರೂ. ಕೊರತೆ ಎದುರಾಗಿದೆ.