

ಬಾಗಲಕೋಟೆ: ಬಿಟಿಡಿಎಯಿಂದ ಬಿವಿವಿ ಸಂಘಕ್ಕೆ ಹಂಚಿಕೆ ಆಗಿದ್ದ ೨೦ ಎಕರೆ ಜಾಗೆಯನ್ನು ರದ್ದು ಪಡಿಸುವಲ್ಲಿ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಶಡ್ಯಂತ್ರ ಇದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ನೇರ ಆರೋಪ ಮಾಡಿದ್ದಾರೆ.
ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಮ್ಮದೇ ಸ್ವಪಕ್ಷದ ಎಂಎಲ್ಸಿ ವಿರುದ್ಧ ಕಿಡಿಕಿಡಿಯಾದ ಚರಂತಿಮಠ, ಪೂಜಾರ ಅವರು ಓರ್ವ ಸಚಿವರ ಕಚೇರಿಯಲ್ಲಿ ಕುಳಿತು ಬಿವಿವಿ ಸಂಘದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಸಂಘಕ್ಕೆ ಕಾನೂನುಬಾಹಿರವಾಗಿ ಬೇಕಾಬಿಟ್ಟಿ ಜಾಗೆ ಪಡೆದುಕೊಂಡಿದ್ದಾರೆ. ಅದನ್ನು ರದ್ದು ಪಡಿಸಬೇಕು. ಆದರೆ, ನನ್ನ ಹೆಸರು ಮಾತ್ರ ಎಲ್ಲಿಯೂ ಬರಬಾರದು ಎಂದು ಮಂತ್ರಿಯೊಬ್ಬರಿಗೆ ಹೇಳಿದ್ದನ್ನು ಅದೇ ಕಚೇರಿಯಿಂದ ಒಬ್ಬರು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಬಿವಿವಿ ಸಂಘಕ್ಕೆ ಕೊಟ್ಟ ಜಾಗೆ ಕಾನೂನುಬಾಹಿರ ಎಂದು ಹೇಳಲು ಪಿ.ಎಚ್.ಪೂಜಾರ ಅವರಿಗೆ ಏನು ರೋಗ ಬಂದಿದೆ ಎಂದು ಗರಂ ಆದ ಚರಂತಿಮಠ, ಆ ಮಂತ್ರಿಗಳು ಯಾರು ಎಂದು ಮುಂದೆ ಹೇಳುತ್ತೇನೆ ಎಂದರು.
ಬಾಗಲಕೋಟೆಯಲ್ಲಿ ಇತರೆ ಶಿಕ್ಷಣ ಸಂಸ್ಥೆಗಳಿಗೆ ಜಾಗೆ ನೀಡಿರುವ ಬಗ್ಗೆ ತಾವುದೇ ತಕರಾರು ಇಲ್ಲ. ಆ ಸಂಸ್ಥೆಗಳು ಸಹ ವಿದ್ಯಾದಾನ ಮಾಡುತ್ತಿವೆ. ಆದರೆ, ನಮ್ಮ ಒಂದೇ ಸಂಸ್ಥೆಗೆ ಹಂಚಿಕೆ ಮಾಡಿದ್ದನ್ನು ರದ್ದು ಮಾಡಿದ್ದು ಸರಿಯಲ್ಲ ಎಂದು ಸ್ಪಷ್ಟಪಡಿಸಿದರು.
ಪಿ.ಎಚ್.ಪೂಜಾರ ಬಿಜೆಪಿಯಿಂದ ಹೊರಬಂದು ಜೆಡಿಎಸ್, ಕಾಂಗ್ರೆಸ್, ಪಕ್ಷೇತರ ಎಲ್ಲವೂ ಮುಗಿಸಿ ಮತ್ತೆ ಬಿಜೆಪಿಗೆ ಬಂದು ಎಂಎಲ್ಸಿ ಆಗಿದ್ದಾರೆ. ಆದರೂ ಪಕ್ಷ ನಿಷ್ಠೆ ಅವರಲ್ಲಿಲ್ಲ. ಎಂಎಲ್ಸಿ ಆದ ಬಳಿಕ ಬಿಟಿಡಿಎ ಮೆಂಬರ್ ಆಗಬೇಕು ಎನ್ನುವ ಅದೇನೂ ಆಸಕ್ತಿಯೋ ಇವರಿಗೆ. ವಿನಂತಿ ಮಾಡಿಕೊಂಡು ಬಿಟಿಡಿಎ ಸಭೆಗೆ ಆಹ್ವಾನ ಬರುವಂತೆ ಮಾಡಿಕೊಂಡಿದ್ದಾರೆ. ಬಿಟಿಡಿಎ ಸಭೆಗೆ ಶಾಸಕರು ಮತ್ತು ಸಂಸದರಿಗೆ ಮಾತ್ರ ಆವ್ಹಾನ ಇತ್ತು. ಅದು ಈಗಲೂ ಮುಂದುವರೆದಿತ್ತು ಎಂದರು. ಮನವಿ ಮಾಡಿಕೊಂಡು ಮೆಂಬರ್ ಆಗಿದ್ದಾರೆ. ಆ ಋಣ ತೀರಿಸಲು ಬಿವಿವಿ ಸಂಘದ ಬಗ್ಗೆ ತಪ್ಪು ಮಾಹಿತಿ ಕೊಟ್ಟು ಹಂಚಿಕೆಯಾಗಿದ್ದ ಜಾಗವನ್ನು ರದ್ದು ಪಡಿಸುವ ಕೆಲಸ ಮಾಡಿದ್ದಾರೆ ಎಂದು ದೂರಿದ ಚರಂತಿಮಠ, ಬಿಜೆಪಿಯಲ್ಲಿ ಎಂಎಲ್ಸಿ ಆಗಿದ್ದೀರಿ. ಕಾಂಗ್ರೆಸ್ ನೊಂದಿಗಿನ ಹೊಂದಾಣಿಕೆ ಇನ್ನೂ ನಿಂತಿಲ್ಲ. ಈ ವಿಚರವನ್ನು ನಾನು ಪಕ್ಷದಲ್ಲಿ ಮೇಲಿನವರಿಗೆ ತಿಳಿಸಿದ್ದೇನೆ, ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದರು.