ಬಿಳಿಗಿರಿರಂಗನಾಥ ಸ್ವಾಮಿ ದೇಗುಲದಲ್ಲಿ ಇ-ಹುಂಡಿ ವ್ಯವಸ್ಥೆ

07 yelandur 02
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆಯ ಹುಂಡಿಯ ಜತೆ ಇ-ಹುಂಡಿಗೆ ಚಾಲನೆ ದೊರೆಯುತ್ತಿದ್ದು, ಭಕ್ತರು ಯುಪಿಐ ಆ್ಯಪ್‌ಗಳ ಮೂಲಕ ಕಾಣಿಕೆ ಹಣ ಪಾವತಿಸುವ ಸೇವೆಯನ್ನು ಪ್ರಾರಭಿಸಲಾಗಿದೆ.

ದೇಗುಲಕ್ಕೆ ವಿಶೇಷ ದಿನಗಳಲ್ಲಿ ಸಾವಿರಾರು ಜನ ಭಕ್ತರು ಆಗಮಿಸುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ದೇಗುಲದ ಆಡಳಿತ ಮಂಡಳಿ ವತಿಯಿಂದ ದೇಗುಲದ 7 ಹುಂಡಿಗಳ ಹಣ ಏಣಿಕೆ ಕಾರ್ಯ ಮಾಡಲಾಗುತ್ತದೆ. ಇದೀಗ ಭಕ್ತರಿಗೆ ಅನುಕೂಲವಾಗಲೆಂದು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಇ-ಹುಂಡಿಗೆ ಕಾಣಿಕೆ ಹಾಕುವ ಅವಕಾಶ ಒದಗಿಸಲಾಗಿದೆ. ಯುಪಿಐ ಆ್ಯಪ್ ಮೂಲಕ ಹಣ ಸಲ್ಲಿಸುವ ಯೋಜನೆ ಪ್ರಾರಂಭಿಸಿರುವುದಿಂದ ಭಕ್ತರು ಇರುವಲ್ಲಿಯೇ ದೇವಸ್ಥಾನದ ಖಾತೆಗೆ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಸೇರಿದಂತೆ ಇನ್ನಿತರ ಆ್ಯಪ್‌ಗಳಿಂದ ಕಾಣಿಕೆ ಹಣ ಜಮಾ ಮಾಡಬಹುದಾಗಿದೆ.

ಮೊಬೈಲ್ ನೆಟ್‌ವರ್ಕ್ ಸಿಗುವುದಿಲ್ಲ: ತಾಲೂಕಿನ ಬಿಳಿಗಿರಿರಂಗನಬೆಟ್ಟ ದೇವಸ್ಥಾನದಲ್ಲಿ ಭಕ್ತರಿಗೆ ಕಾಣಿಕೆ ಹಣ ಸಲ್ಲಿಸಲು ಮೊಬೈಲ್ ನೆಟ್‌ವರ್ಕ್ ಸಮರ್ಪಕವಾಗಿ ಸಿಗುತ್ತಿಲ್ಲ. ಇದರಿಂದ ತಾಂತ್ರಿಕ ದೋಷ ಕಾಣಿಸಿಕೊಂಡಾಗ ಹಣ ಕಡಿತ ಅಥವಾ ಜಮಾ ಆದ ಬಗ್ಗೆ ಯಾವುದೇ ಸ್ಪಷ್ಟತೆ ಸಿಗದೆ ಪರದಾಡಬೇಕಾಗುತ್ತದೆ ಎಂಬುದು ಭಕ್ತರ ಅಳಲು. ಆದ್ದರಿಂದ ಸಮರ್ಪಕ ನೆಟ್ ಸಿಗುವ ವ್ಯವಸ್ಥೆ ಮಾಡಿದರೆ ನಿಶ್ಚಿಂತೆಯಿಂದ ಹಣ ಪಾವತಿ ಮಾಡಬಹುದಾಗಿದೆ ಎಂದು ಭಕ್ತರು ತಿಳಿಸಿದ್ದಾರೆ.

ದೇಗುಲದಲ್ಲಿ 4 ಸ್ಕ್ಯಾನರ್ ಪರದೆ : ದೇಗುಲದ ಪ್ರವೇಶದ್ವಾರ, ದೇವಸ್ಥಾನದ ಪ್ರವೇಶ, ಅಲಮೇಲಮ್ಮ ದೇವಸ್ಥಾನದ ಪ್ರವೇಶದ್ವಾರ ಸೇರಿದಂತೆ 4 ಸ್ಥಳಗಳಲ್ಲಿ ಕ್ಯೂ ಆರ್ ಕೋಡ್ ಪರದೆಗಳನ್ನು ಇಡಲಾಗಿದೆ. ಇದರಿಂದ ಭಕ್ತರು ನೀಡುವ ಕಾಣಿಕೆ ಹಣ ದೇವಸ್ಥಾನದ ಖಾತೆಗೆ ಜಮಾ ಆಗುವುದರಿಂದ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net