ಬಿಳಿಗಿರಿರಂಗನಬೆಟ್ಟಕ್ಕೆ ಭಕ್ತರ ದಂಡು

Biligirirangana betta
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಮೊದಲ ಶ್ರಾವಣ ಶನಿವಾರ ಹಿನ್ನೆಲೆಯಲ್ಲಿ ಭಕ್ತರ ದಂಡು ಹೆಚ್ಚಾಗಿರುವುದು.
Published on

ಯಳಂದೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಶ್ರಾವಣ ಮಾಸದ ಮೊದಲ ಶನಿವಾರ ಭಕ್ತರ ದಂಡೇ ಆಗಮಿಸಿತ್ತು.

ಅಲಮೇಲು ರಂಗನಾಯಕಿ, ಬಿಳಿಗಿರಿರಂಗನಾಥಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿಸಲಾಯಿತು. ಮುಂಜಾನೆಯಿಂದಲೇ ಸಾವಿರಾರು ಜನರು ಸರತಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬಂತು. ಎಲ್ಲರೂ ದೊಡ್ಡ ತೇರಿನ ಬೀದಿಯಲ್ಲಿ ತಮ್ಮ ವಾಹನ ನಿಲ್ಲಿಸಿ ನಡೆದುಕೊಂಡೇ ದೇಗುಲಕ್ಕೆ ತೆರಳಿದರು.

ದೇವಸ್ಥಾನದ ಮುಂಭಾಗ ದಾಸರು ಶಂಖ-ಜಾಗಟೆಗಳನ್ನು ಬಾರಿಸಿದರು. ಕಡ್ಲೆಪುರಿ, ಬೆಲ್ಲ, ಅಕ್ಕಿ, ಬಾಳೆಹಣ್ಣು ಹಾಕಿ ದೇಗುಲದ ಸುತ್ತ ಬಹುಪರಾಕ್ ಸೇವೆ ಮಾಡುವ ಭಕ್ತರ ಸಂಖ್ಯೆಯೂ ಹೆಚ್ಚಾಗಿತ್ತು. ದೇಗುಲ ಮುಂಭಾಗದಲ್ಲಿನ ಹೂವು-ಹಣ್ಣು, ಪೂಜಾ ಸಾಮಾಗ್ರಿ ಅಂಗಡಿಗಳಿಗೆ ಭರ್ಜರಿ ವ್ಯಾಪಾರವಾಯಿತು. ದೇಗುಲದ ಕಮರಿಯಲ್ಲಿರುವ ದಾಸೋಹ ಭವನದಲ್ಲೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ದೇಗುಲದ ದಾಸೋಹ ಹಾಗೂ ಕಮರಿಗೆ ತೆರಳುವ ದೇಗುಲದ ಮಾರ್ಗವನ್ನು ಬಂದ್ ಮಾಡಿ ಪರ್ಯಾಯ ಮಾರ್ಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net