

ಯಳಂದೂರು: ಬಿಳಿಗಿರಿರಂಗನಬೆಟ್ಟವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ರೂಪಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಭರವಸೆ ನೀಡಿದರು.
ಬಿಳಿಗಿರಿರಂಗನಬೆಟ್ಟದಲ್ಲಿ ಶನಿವಾರ ದೇಗುಲಕ್ಕೆ ತೆರಳಲು ಮೆಟ್ಟಿಲು ಹಾಗೂ ರೈಲಿಂಗ್ಸ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಮುಖ ದೇಗುಲ ಇದಾಗಿದೆ. ಬಿಳಿಗಿರಿರಂಗನಿಗೆ ಅನ್ಯರಾಜ್ಯ ಹಾಗೂ ದೇಶಾದ್ಯಂತ ಭಕ್ತರಿದ್ದಾರೆ. ಆದರೆ, ಬೆಟ್ಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗಿಲ್ಲ. ಈಗ ಪ್ರವಾಸೋದ್ಯಮ ಇಲಾಖೆ ವತಿಯಿಂದ 4 ಕೋಟಿ ರೂ. ಮಂಜೂರಾಗಿದ್ದು, ಹೊಸದಾಗಿ ನಿರ್ಮಾಣಗೊಂಡಿರುವ ರಾಜಗೋಪುರಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ 300 ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಜತೆಗೆ ರೈಲಿಂಗ್ಸ್ ಹಾಗೂ ಕಲ್ಯಾಣಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕಾಂಕ್ರೀಟ್ ಕೂಡ ಹಾಕಲಾಗುವುದು ಎಂದು ಹೇಳಿದರು.
ದೇಗುಲದ ಹೆಸರಿನಲ್ಲಿರುವ 1 ಎಕರೆ ಜಾಗವನ್ನು ಬಸ್ ನಿಲ್ದಾಣಕ್ಕೆ ಈಗಾಗಲೇ ನೀಡಲಾಗಿದ್ದು, ಇಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದಲೂ ಇದೆ. ಇದಕ್ಕೆ ಆದ್ಯತೆ ನೀಡಲಾಗುವುದು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು. ಕಲ್ಯಾಣಿ ಕೊಳದ ಜೀರ್ಣೋದ್ಧಾರಕ್ಕೂ ಕ್ರಮ ವಹಿಸಲಾಗುವುದು ಎಂದರು.
ಹೊಸ ದಾಸೋಹ ಭವನ ನಿರ್ಮಾಣಕ್ಕೂ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿ ಸರ್ಕಾರದಿಂದ ವಿಶೇಷ ಅನುದಾನ ತಂದು ಇದರ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಶಾಸಕರು, ನಂತರ ದಾಸೋಹ ಭವನವನ್ನು ವೀಕ್ಷಿಸಿದರು. ಗ್ರಾಪಂ ಅಧ್ಯಕ್ಷ ಪ್ರದೀಪ್‌ಕುಮಾರ್, ಉಪಾಧ್ಯಕ್ಷೆ ಕಮಲಮ್ಮ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಕೇತಮ್ಮ, ವಡಗೆರೆದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ತೋಟೇಶ್, ಪುಟ್ಟಸ್ವಾಮಿ, ತಾಪಂ ಇಒ ಉಮೇಶ್, ದೇಗುಲದ ಇಒ ಮೋಹನ್‌ಕುಮಾರ್, ಶಾಸಕರ ಆಪ್ತ ಸಹಾಯಕ ಚೇತನ್, ವೆಂಕಟೇಶ್, ಜೆಇ ಸುರೇಂದ್ರ ಇತರರಿದ್ದರು.