

ಯಳಂದೂರು: ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಬಿಳಿಗಿರಿರಂಗ ಬೆಟ್ಟದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಇಲ್ಲಿಗೆ ಬೇಕಿರುವ ಸವಲತ್ತುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಮಾಹಿತಿ ನೀಡಿದರು.
ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಬಿಳಿಗಿರಿರಂಗನಾಥಸ್ವಾಮಿ ದೇಗುಲಕ್ಕೆ ಬುಧವಾರ ಭೇಟಿ ನೀಡಿ, ದೇವರ ದರ್ಶನ ಪಡೆದು ಮಾತನಾಡಿದರು. ಈ ಸಂದರ್ಭದಲ್ಲಿ ದೇಗುಲಕ್ಕೆ ಈಚೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ನಿತ್ಯ ದಾಸೋಹ ವ್ಯವಸ್ಥೆ ಇದೆ. ಆದರೆ ದಾಸೋಹ ಭವನವಿಲ್ಲ. ಈಗ ದೇಗುಲದ ಹಿಂಭಾಗದಲ್ಲಿ ಶೆಡ್‌ನಲ್ಲಿ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗುತ್ತಿದ್ದು, ಇಲ್ಲಿಗೆ ಸುಸಜ್ಜಿತ ದಾಸೋಹ ವ್ಯವಸ್ಥೆ ಮಾಡಿಸಿಕೊಡಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದರು.
ಬಸ್ ನಿಲ್ದಾಣವೂ ಇಲ್ಲಿ ಇಲ್ಲ. ಬರುವ ಪ್ರವಾಸಿಗರಿಗೆ ಇದರಿಂದ ತೊಂದರೆಯಾಗುತ್ತಿದೆ. ಬಿಸಿಲು, ಮಳೆಯಲ್ಲಿ ಇವರು ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಹೈಟೆಕ್ ಶೌಚಗೃಹ ನಿರ್ಮಿಸಬೇಕು. ಯಳಂದೂರಿನಿಂದ ಬಿಳಿಗಿರಿರಂಗನಬೆಟ್ಟಕ್ಕೆ ತೆರಳುವ ರಸ್ತೆ ಮಾರ್ಗವು ಅತ್ಯಂತ ಚಿಕ್ಕದಾಗಿದೆ. ರಸ್ತೆ ಬದಿಯಲ್ಲಿ ಮಳೆಯಿಂದ ಕೊರಕಲು ಉಂಟಾದರೆ ಮತ್ತೊಂದು ವಾಹನ ಸಂಚರಿಸುವುದು ಕಷ್ಟವಾಗುತ್ತದೆ. ಅರಣ್ಯ ಇಲಾಖೆ ಇಲ್ಲಿಗೆ ಮಣ್ಣು ಸುರಿಯಲು ಅವಕಾಶ ನೀಡುವುದಿಲ್ಲ. ಹಾಗಾಗಿ ಈ ರಸ್ತೆಯನ್ನು ವಿಸ್ತರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಎಲ್ಲ ಸಮಸ್ಯೆಗಳಿಗೂ ನಾನು ಸೂಕ್ತ ಮಾಹಿತಿ ಪಡೆದುಕೊಂಡು ಅಭಿವೃದ್ಧಿಗೆ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇಗುಲದಲ್ಲಿ ವಿಶೇಷ ಪೂಜೆ, ಅರ್ಚನೆ ಮಾಡಲಾಯಿತು. ದೇಗುಲ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್, ಎಸ್‌ಪಿ ಡಾ. ಬಿ.ಟಿ. ಕವಿತಾ, ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಶ್ರೀರೂಪಾ, ಜಂಟಿ ನಿರ್ದೇಶಕಿ ಪ್ರತಿಭಾ, ರಿಜಿಸ್ಟ್ರಾರ್ ಡಾ.ಟಿ. ರಾಮೇಗೌಡ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಐ.ಈ. ಬಸವರಾಜು, ಸಿಪಿಐ ಶ್ರೀಕಾಂತ್, ಪಿಎಸ್‌ಐ ಆಕಾಶ್, ವಿಜ್ಞಾನಿಗಳಾದ ಡಾ. ಮಂಜುನಾಥ್, ಡಾ.ರಮೇಶ್, ಡಾ.ಪಿ.ಜೆ.ರಾಜು ದೇಗುಲದ ಪಾರುಪತ್ತೇದಾರ ರಾಜು, ಪ್ರಧಾನ ಅರ್ಚಕ ರವಿಕುಮಾರ್, ಶ್ರೀನಿವಾಸ್, ಶೇಷಾದ್ರಿ ಇತರರು ಇದ್ದರು.