

ಬಾಳೆಹೊನ್ನೂರು: ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶ ಇಡೀ ಸಮಾಜಕ್ಕೆ ಮಾದರಿ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಂಗಳವಾರ ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘದ ಕೋಟಿ ಚೆನ್ನಯ್ಯ ಬಯಲು ರಂಗಮಂದಿರ ಉದ್ಘಾಟಿಸಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು ಎಲ್ಲ ಧರ್ಮದವರಿಗೂ ಪ್ರೇರಣಾದಾಯಕ ಶಕ್ತಿಯಾಗಿರುವುದರಿಂದ ರಾಜ್ಯ ಸರ್ಕಾರ ನಾರಾಯಣಗುರುಗಳ ಜಯಂತಿಯನ್ನು ಆಚರಣೆಗೆ ಜಾರಿಗೆ ತಂದಿದೆ ಎಂದರು.
ನಾರಾಯಣಗುರುಗಳ ಉದಾತ್ತ ಚಿಂತನೆ, ದೂರದೃಷ್ಟಿಯಿಂದ ಬಿಲ್ಲವ ಸಮುದಾಯ ಬೆಳೆದು, ಎಲ್ಲ ಕ್ಷೇತ್ರಗಳಲ್ಲೂ ಸಮಾಜ ಬಾಂಧವರು ಸಕ್ರಿಯವಾಗಿದ್ದಾರೆ. ಬಿಲ್ಲವ ಸಮುದಾಯದವರು ಗುರಿ ಇಟ್ಟುಕೊಂಡು ಮುನ್ನಡೆದಲ್ಲಿ ಸಮಾಜದಲ್ಲಿ ಸಾಧನೆ ಮಾಡಲು ಸಾಧ್ಯ. ಸಂಘಟನೆಯು ರಾಜಕೀಯ ರಹಿತವಾಗಿ ಮುನ್ನಡೆದಲ್ಲಿ ಮಾತ್ರ ಉನ್ನತ ಸ್ಥಾನ ಗಳಿಸಲು ಸಾಧ್ಯ ಎಂದು ಹೇಳಿದರು.
ನನ್ನ ಆಡಳಿತ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ಬಿಲ್ಲವ, ಈಡಿಗ ಸಮುದಾಯದ ಸಂಘಟನೆಗಳಿಗೆ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಿದ್ದೇನೆ. ಮುಂದಿನ ವರ್ಷವೂ ಇನ್ನಷ್ಟು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಜೀವನ ಭದ್ರತೆ, ಕೂಲಿಗಾಗಿ ದಕ್ಷಿಣ ಕನ್ನಡದಿಂದ ವಲಸೆ ಬಂದ ಬಿಲ್ಲವ ಸಮುದಾಯದವರು ಶ್ರಮಿಕರಾಗಿದ್ದು, ಇಲ್ಲಿ ಸಮುದಾಯ ನೀಡಿದ ಕೊಡುಗೆ ಅಮೂಲ್ಯವಾಗಿದೆ. ನನ್ನ ರಾಜಕೀಯ ಅಧಿಕಾರಕ್ಕೆ ಬಿಲ್ಲವ ಸಮುದಾಯದ ಶ್ರಮ ಅಪಾರವಿದೆ. ಈ ಸಮುದಾಯದ ಋಣ ನನ್ನ ಮೇಲಿದೆ. ಸಮುದಾಯದಲ್ಲಿ ರಾಜಕೀಯ ಹೊರತುಪಡಿಸಿದ ಸಂಘಟನೆ ಆಗಬೇಕಿದ್ದು, ನಾಯಕತ್ವವುಳ್ಳ ಸಮುದಾಯವನ್ನು ಬೆಳೆಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ ಎಂದರು.
ನಾರಾಯಣಗುರುಗಳು ಕೇರಳದಲ್ಲಿ ನಡೆಯುತ್ತಿದ್ದ ಶೋಷಣೆ, ದೌರ್ಜನ್ಯದ ವಿರುದ್ಧ ಧ್ವನಿಯಾದವರು. ದೇಶದ ಶೋಷಿತ ವರ್ಗದ ಪರ ಕೆಲಸ ಮಾಡಿದ ನಾರಾಯಣಗುರುಗಳು ದೇಶಕ್ಕೆ ನಾಯಕರಾಗಿದ್ದರು. ಶೃಂಗೇರಿ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯ ಹಲವು ಕೊಡುಗೆಗಳಿದೆ ಎಂದು ಹೇಳಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ನಾರಾಯಣಗುರುಗಳು ಸಮಾನತೆ ಪ್ರತಿಪಾದಿಸಿದವರು. ಅವರ ಚಿಂತನೆ ಇಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ. ಬಿಲ್ಲವ ಸಮುದಾಯದವರು ಶಿಕ್ಷಣದ ಮೂಲಕ ಸ್ವಾವಲಂಬನೆ ಸಾಧಿಸಬೇಕು. ಮಕ್ಕಳಿಗೆ ನಮ್ಮ ಹಿರಿಯರು ಪಟ್ಟ ಶ್ರಮ ತಿಳಿಸಿದರೆ ಮಾತ್ರ ಯುವಕರು ಸಾಧನೆ ಮಾಡಲು ಸಾಧ್ಯ. ಸಮುದಾಯದ ಮಕ್ಕಳು ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದಲ್ಲಿ ಸಮುದಾಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಸಾಧ್ಯವಾಗಲಿದೆ ಎಂದರು.
ಬಿಲ್ಲವ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್, ಗೌರವಾಧ್ಯಕ್ಷ ಸತೀಶ್ ಅರಳೀಕೊಪ್ಪ, ಗೆಜ್ಜೆಗೆರಿ ಕ್ಷೇತ್ರದ ಅಧ್ಯಕ್ಷ ರವಿ ಚಿಲಿಂಬಿ, ನಾರಾಯಣ ಗುರು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಗ್ರಾಪಂ ಅಧ್ಯಕ್ಷ ರವಿಚಂದ್ರ, ಪ್ರಮುಖರಾದ ಪಿ.ಆರ್.ಸದಾಶಿವ, ರಾಮ ಡಿ.ಸಾಲಿಯಾನ್, ಪಾರ್ವತಮ್ಮ, ಪ್ರಕಾಶ್ ಕರ್ಕೇಶ್ವರ, ಕೆ.ಜೆ.ಶ್ರೀನಿವಾಸ್, ಎಂ.ಎಸ್.ಅರುಣೇಶ್, ದೀಪಾ, ಹಿತೈಶಿ ಚೇತನ್, ಜಗದೀಶ್ ಅರಳೀಕೊಪ್ಪ, ಜಯಾ ಪ್ರಭಾಕರ್, ಶೇಖರ್ ಇಟ್ಟಿಗೆ, ಕುಮಾರ್ ಇತರರಿದ್ದರು.