

ಮೈಸೂರು: ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ (ಎಐಎಂಎಸ್‌ಎಸ್) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.
ಗುಜರಾತ್‌ನಲ್ಲಿ 2002ರಲ್ಲಿ ನಡೆದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅವರ ಕುಟುಂಬದ 7 ಸದಸ್ಯರನ್ನು ಕೊಲೆ ಮಾಡಿರುವ 11 ಅಪರಾಧಿಗಳನ್ನು ಕ್ಷಮಾಪಣಾ ನೀತಿಯಡಿಯಲ್ಲಿ ಬಿಡುಗಡೆ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.
ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಆಕೆಯ ಕಣ್ಣೆದುರೇ ಅವಳ 3 ವರ್ಷದ ಮಗುವನ್ನು ಸಾಯಿಸಿ, ಅವಳ ಕುಟುಂಬದ ಸದಸ್ಯರನ್ನು ಕೊಲೆ ಮಾಡಲಾಗಿತ್ತು. ಇಂತಹ ಭೀಕರ, ಆಘಾತಕಾರಿ ಸನ್ನಿವೇಶವನ್ನು ಎದುರಿಸಿದ ಬಿಲ್ಕಿಸ್ ಬಾನು ಧೈರ್ಯದಿಂದ ಕಾನೂನು ಹೋರಾಟ ನಡೆಸಿದರು. ಇದರ ಫಲವಾಗಿ ಸಿಬಿಐ ನ್ಯಾಯಾಲಯವು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಆದರೀಗ ಈ ಅಪರಾಧಿಗಳನ್ನು ಕಾನೂನು ಬಾಹಿರವಾಗಿ ಬಿಡುಗಡೆ ಮಾಡಿರುವುದು ಆಘಾತಕಾರಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದನ್ನು ಹಿಂತೆಗೆದುಕೊಂಡು, ಅವರಿಗೆ ತಕ್ಕ ಶಿಕ್ಷೆಯನ್ನು ಖಾತ್ರಿ ಪಡಿಸಬೇಕು. ಸಂತ್ರಸ್ತೆಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಎಂ.ಉಮಾದೇವಿ, ಗಾಯತ್ರಿ, ಶೀಬಾ, ಜಿ.ಎಸ್.ಸೀಮಾ, ಅಭಿಲಾಶಾ, ಭಾಗಿರಥಿ, ಪೂರ್ಣಿಮಾ ಕೋಟ ಇನ್ನಿತರರು ಇದ್ದರು.