ಬಿರುಸು ಪಡೆದ ಭತ್ತದ ನಾಟಿ ಕಾರ್ಯ

9spt4
ಸೋಮವಾರಪೇಟೆ ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ನಾಟಿ ಮಾಡುತ್ತಿರುವುದು.
Published on

ಸೋಮವಾರಪೇಟೆ: ಅತಿ ಹೆಚ್ಚು ಮಳೆಯಾಗುವ ಪಶ್ಚಿಮಘಟ್ಟ ಸರಹದ್ದಿನ ಗ್ರಾಮಗಳಲ್ಲಿ ಭತ್ತದ ನಾಟಿ ಕಾರ್ಯ ಬಿರುಸಿನಿಂದ ಸಾಗುತ್ತಿದೆ.


ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮಗಳಲ್ಲಿ ಜುಲೈ 1ರಿಂದ 6 ತನಕ ಒಟ್ಟು 14 ಇಂಚು ಮಳೆ ಸುರಿದಿದೆ. ಜೂನ್ ತಿಂಗಳಲ್ಲಿ 6 ಇಂಚು ಮಳೆ ಸುರಿದ ಹಿನ್ನೆಲೆಯಲ್ಲಿ ಕೃಷಿಕರು ಸಸಿ ಮಡಿ ಮಾಡಿಕೊಂಡಿದ್ದರು. ಎರಡು ದಿನಗಳಿಂದ ಮಳೆಯ ಆರ್ಭಟ ಕಡಿಮೆಯಾದಂತೆ ಭತ್ತ ನಾಟಿ ಮಾಡುತ್ತಿದ್ದಾರೆ.
ಉಳುಮೆ ಮಾಡಿದ್ದ ಗದ್ದೆಗಳಲ್ಲಿ ನೀರಿನ ಸಂಗ್ರಹ ಜಾಸ್ತಿಯಿದ್ದು, ಈಗ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ನೀರು ಕಡಿಮೆಯಿದೆ. ಉಕ್ಕಿ ಹರಿಯುತ್ತಿದ್ದ ತೋಡು, ಕೊಲ್ಲಿಗಳಲ್ಲೂ ನೀರಿನ ಹರಿವು ಕಡಿಮೆಯಾಗಿರುವುದರಿಂದ ನಾಟಿ ಮಾಡಲು ಉಪಯೋಗವಾಗಿದೆ ಎಂದು ಹೇಳುತ್ತಾರೆ ಗರ್ವಾಲೆ ಗ್ರಾಮದ ಭತ್ತ ಬೆಳೆಗಾರ ಗೀಜಿಗಂಡ ಲೋಕೇಶ್.


ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಸೂರ್ಲಬ್ಬಿ, ಮಂಕ್ಯಾ, ಗರ್ವಾಲೆ, ಕಿಕ್ಕರಳ್ಳಿ, ಸೂರ್ಲಬ್ಬಿ, ಮೂವತ್ತೊಕ್ಲು, ಇಗ್ಗೊಡ್ಲು ಗ್ರಾಮಗಳಲ್ಲಿ ವಾರ್ಷಿಕವಾಗಿ 300ರಿಂದ 400 ಇಂಚು ಮಳೆಯಾಗುತ್ತದೆ. ಕಾಫಿ, ಏಲಕ್ಕಿ, ಕಾಳುಮೆಣಸು ಫಸಲು ಮಳೆಯಲ್ಲಿ ಹಾನಿಯಾಗುತ್ತದೆ. ಕಾಡಾನೆ, ಕಾಡುಕೋಣ, ಕಾಡುಹಂದಿಗಳ ಕಾಟವಿದ್ದರೂ ಭತ್ತ ಬೆಳೆಯುವುದನ್ನು ಕೃಷಿಕರು ನಿಲ್ಲಿಸಿಲ್ಲ.


ಈ ಗ್ರಾಮಗಳ ಕೃಷಿಕರಿಗೆ ಸದ್ಯಕ್ಕೆ ಭತ್ತವೇ ಜೀವನಾಧಾರ ಬೆಳೆಯಾಗಿದೆ. ಪ್ರತಿವರ್ಷ ಧಾರಾಕಾರ ಮಳೆಯಿಂದ ಫಸಲು ಹಾನಿಯಾಗುತ್ತಿದೆ. ಕಾಡು ಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳುವಂಥ ಪರಿಸ್ಥಿತಿ ಇದೆ. ಜಮ್ಮಾ ಹಿಡುವಳಿ ಇರುವುದರಿಂದ ಕೃಷಿಕರಿಗೆ ಆಸ್ತಿ ದಾಖಲಾತಿಗಳ ಸಮಸ್ಯೆಯಿದೆ. ದಾಖಲಾತಿ ಸಮಸ್ಯೆಯಿಂದ ಮಳೆಹಾನಿ ಪರಿಹಾರ ಬಹುತೇಕ ರೈತರಿಗೆ ಸಿಗುತ್ತಿಲ್ಲ.


ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ ಬೆಲೆ ಗಗನಕ್ಕೇರಿ ಉತ್ಪಾದನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚಿನ ಹೋಬಳಿಗಳಲ್ಲಿ ಕೃಷಿಕರು ಗದ್ದೆ ಭೂಮಿಯನ್ನು ಸಮತಟ್ಟು ಮಾಡಿ ತೋಟಗಾರಿಕಾ ಬೆಳೆಯನ್ನು ಬೆಳೆಯುತ್ತಿರುವ ಸಂದರ್ಭದಲ್ಲಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಹವಾಮಾನ ವೈಪ್ಯರೀತ್ಯ, ಅಕಾಲಿಕ ಮಳೆಗೆ ಸೆಡ್ಡು ಹೊಡೆದು ಭತ್ತ ಕೃಷಿಯನ್ನು ಮುಂದುವರಿಸಿದ್ದಾರೆ.


ಅನೇಕ ಗ್ರಾಮಗಳಿಗೆ ಡಾಂಬರು ರಸ್ತೆಯಿಲ್ಲ. ಕೃಷಿ ಭೂಮಿಗೆ ರಸ್ತೆಗಳಿಲ್ಲ. ಯಂತ್ರಗಳಿಂದ ಉಳುಮೆ ಮಾಡಲು ಸಾಧ್ಯವಿಲ್ಲ. ಜೋಡೆತ್ತುಗಳನ್ನು ಉಪಯೋಗಿಸಿ ಉಳುಮೆ ಮಾಡಿ ನಾಟಿ ಮಾಡುತ್ತಾರೆ. ಕುಟುಂಬಸ್ಥರೇ ಸೇರಿಕೊಂಡು ಗದ್ದೆ ಕೆಲಸ ಮಾಡುತ್ತಾರೆ. ತಾಲೂಕಿನ ಮಟ್ಟಿಗೆ ಮೊದಲು ಭತ್ತ ನಾಟಿ ಕೆಲಸ ಮುಗಿಸುವುದು ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಎನ್ನುತ್ತಾರೆ ರೈತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net