

ಮೈಸೂರು: ನಗರದಲ್ಲಿ ಭಾನುವಾರ ಸಂಜೆ ಬಿರುಗಾಳಿಗೆ ಹಲವು ಮರಗಳು ಧರೆಗುರುಳಿವೆ. ಬೆಳಗ್ಗೆಯಿಂದ ಬಿರು ಬಿಸಿಲು ಇದ್ದು, ಸಂಜೆ ದಟ್ಟ ಮೋಡ ಕವಿದು ಬಿರುಗಾಳಿ ಆರಂಭಿಸಿತು. ಜೋರು ಗಾಳಿಗೆ ನಗರದ ನ್ಯಾಯಾಲಯದ ಮುಂಭಾಗ, ಮುಡಾ ಎದುರಿನ ಜೆಎಲ್‌ಬಿ ರಸ್ತೆ, ಅಗ್ರಹಾರದ ಕೆ.ಆರ್.ಪೊಲೀಸ್ ಠಾಣೆ ಬಳಿ ಸೇರಿದಂತೆ ಹಲವು ಕಡೆ ಮರ ಹಾಗೂ ರೆಂಬೆ, ಕೊಂಬೆಗಳು ಉರುಳಿ ಬಿದ್ದವು. ಇದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ನ್ಯಾಯಾಲಯ ಹಾಗೂ ಅಗ್ರಹಾರದ ಬಳಿ ಪುಟ್‌ಪಾತ್‌ನಲ್ಲಿ ವ್ಯಾಪಾರ ಮಾಡುತ್ತಿದ್ದ ಸಮೀಪವೇ ಮರಗಳು ಉರುಳಿ ಬಿದ್ದು ಜನರಲ್ಲಿ ಆತಂಕ ಉಂಟಾಗಿತ್ತಾದರೂ ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ.
ಸುಮಾರು ಒಂದು ಗಂಟೆ ಕಾಲ ಬಿರುಗಾಳಿಯೊಂದಿಗೆ ಮಳೆ ಸುರಿದಿದ್ದರಿಂದ ನಗರದ ಹಲವೆಡೆ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಯಿತು. ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು.