

ಮದ್ದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಯಿಂದಾಗಿ ನೀರು ಭತ್ತದ ಫಸಲು ಹಾಗೂ ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಕೆಂಚೇಗೌಡ ಎಂಬುವರ ಮನೆಗೆ ನೀರು ನುಗ್ಗಿ ಧಾನ್ಯಗಳು ನೀರು ಪಾಲಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಜತೆಗೆ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ನೀರು ಚರಂಡಿ ಮೂಲಕ ನದಿಗೆ ಸೇರದ ಪರಿಣಾಮ ಮದ್ದೂರಿನ ಶಿಂಷಾ ನದಿ ಸಮೀಪದ ಕೆ.ಕೋಡಿಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ನುಗ್ಗಿ ಅಂದಾಜು 30 ಎಕರೆಯಷ್ಟು ಭತ್ತದ ಬೆಳೆ ನಾಶವಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ರಾಜೇಗೌಡನದೊಡ್ಡಿ ಗ್ರಾಮದ ಪುಟ್ಟಮ್ಮ, ಚೆನ್ನಮ್ಮ, ಮುತ್ತುಲಕ್ಷ್ಮೀ, ರಮೇಶ್, ಲಿಂಗಯ್ಯ, ಚೌಡೇಶ್ ಅವರಿಗೆ ಸೇರಿದ ಸುಮಾರು 8 ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ಧಾನ್ಯಗಳು, ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಜಲಾವೃತವಾಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.
ಕಬ್ಬಿನ ಬೆಳೆ ನಾಶ: ಚನ್ನಸಂದ್ರ ಗ್ರಾಮದ ರೈತ ಲಕ್ಷ್ಮಣ್ ಅವರಿಗೆ ಸೇರಿದ 4 ಎಕರೆ ಪ್ರದೇಶದ ಕಬ್ಬಿನ ಬೆಳೆ ಮಳೆಗೆ ನಾಶವಾಗಿದ್ದು, ಸುಮಾರು 2 ಲಕ್ಷ ರೂ. ನಷ್ಟ ಉಂಟಾಗಿದೆ. ಅಲ್ಲದೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳು, ಬೆಳೆಗಳಿಗೆ ನೀರು ನುಗ್ಗಿ ಹಲವು ಅವಾಂತರ ಸೃಷ್ಟಿ ಮಾಡಿದ್ದು, ಸರ್ಕಾರ ಮತ್ತು ತಾಲೂಕು ಆಡಳಿತ ಸೂಕ್ತ ಪರಿಹಾರ ನೀಡುವಂತೆ ನಷ್ಟಕ್ಕೀಡಾದವರು ಮನವಿ ಮಾಡಿದ್ದಾರೆ.