ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ ಮಾವು

1
Published on

ಕೋಲಾರ: ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಬಿರಿಗಾಳಿ ಸಹಿತ ಜೋರುಮಳೆಯಾದ ಹಿನ್ನೆಲೆಯಲ್ಲಿ ಮಾವು ಸೇರಿ ವಿವಿಧ ಬೆಳೆಗಳು ನಷ್ಟವಾಗಿದ್ದು, ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.

ಶುಕ್ರವಾರ ಸ್ವಲ್ಪ ಮಟ್ಟಿಗೆ ಫಸಲು ನಷ್ಟವಾಗಿತ್ತಾದರೂ ಶನಿವಾರ ಬಿರುಗಾಳಿ ಬೀಸಿದ್ದರಿಂದ ಮಾವಿನ ಮರಗಳಲ್ಲಿ ಅಲ್ಪಸ್ವಲ್ಪವಿದ್ದ ಕಾಯಿಗಳು ನೆಲಕಚ್ಚಿವೆ. ಇದರಿಂದಾಗಿ ಮಾವು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಶ್ರೀನಿವಾಸಪುರ ತಾಲೂಕಿನಲ್ಲಿ ಮಳೆ ಮತ್ತು ಬಿರುಗಾಳಿ ಹೆಚ್ಚಾಗಿದ್ದರಿಂದ ತೋಟಗಳಲ್ಲಿ ಬಹುತೇಕ ಮರಗಳ ಕೆಳಗೆ ಕಾಯಿಗಳು ಉದುರಿದ್ದು, ಕೃಷಿಕರು ಮತ್ತು ವ್ಯಾಪಾರಸ್ಥರನ್ನು ಕಂಗಾಲಾಗಿಸಿದೆ.

ಶ್ರೀನಿವಾಸಪುರ ತಾಲೂಕು ಕದಿರಂಪಲ್ಲಿ ಗ್ರಾಮದ ಸುತ್ತಮುತ್ತ ಮಳೆಯಿಂದ ಮಾವಿನ ಕಾಯಿಗಳಷ್ಟೇ ಅಲ್ಲದೆ ಕೊಂಬೆಗಳು ಸಹ ಮುರಿದು ಬಿದ್ದಿದ್ದು, ರೈತರಿಗೆ ಲಕ್ಷಾಂತರ ರೂ. ಕೈಕಚ್ಚುವಂತಾಗಿದೆ. ತಿಂಗಳು ಕಳೆದಿದ್ದರೆ ಮಾವಿನ ಫಸಲು ಮಾರುಕಟ್ಟೆಗೆ ಬರುತ್ತಿತ್ತು. ಕಾಯಿಗಳು ಇನ್ನೇನು ಓಟೆ ಬಲಿಯುವ ಹಂತದಲ್ಲಿದ್ದು, ಉದುರಿರುವ ಕಾಯಿಗಳು ಉಪ್ಪಿನಕಾಯಿ ಹಾಕುವುದು, ತಿನ್ನಲಿಕ್ಕೂ ಪ್ರಯೋಜನಕ್ಕೆ ಬರುವುದಿಲ್ಲ.

ಕಳೆದೆರಡು ವರ್ಷ ಕರೊನಾ, ಲಾಕ್​ಡೌನ್​ನಿಂದಾಗಿ ಮಾವು ಮಾರುಕಟ್ಟೆಯಲ್ಲಿ ಸರಿಯಾಗಿ ಮಾರಾಟವಾಗದೆ ರೈತರು ಮತ್ತು ವ್ಯಾಪಾರಿಗಳು ಲಕ್ಷಾಂತರ ರೂ. ನಷ್ಟ ಹೊಂದಿದ್ದರು. ಈ ಬಾರಿಯಾದರೂ ಒಂದಿಷ್ಟು ಹಣ ನೋಡಬಹುದೆಂಬ ಕಾತುರದಿಂದ ಕಾಯುತ್ತಿದ್ದ ರೈತರಿಗೆ ಮಳೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತೆ ಮಾಡಿದೆ. ಹಲವೆಡೆ ರೈತರಿಗೆ ಮೊದಲೇ ಹಣಕೊಟ್ಟು ಮಾವಿನ ತೋಪುಗಳನ್ನು ಒಪ್ಪಂದದ ಮೇಲೆ ಖರೀದಿಸಿರುವ ವ್ಯಾಪಾರಿಗಳು, ಈ ಬಾರಿಯೂ ನಷ್ಟವಾದರೆ ಗತಿಯೇನು ಎಂದು ಯೋಚಿಸುವಂತಾಗಿದೆ.

ಕುಡಿಚರವು ಗ್ರಾಮದ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ ಮನೆಗೆ ಸಿಡಿಲು ಬಡಿದು ಮೇಲ್ಚಾವಣಿ ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆಯಲ್ಲಿದ್ದ ವಸ್ತುಗಳು ಹಾನಿಗೀಡಾಗಿದ್ದು, ಸರ್ಕಾರ ರೈತರಿಗೆ ನಷ್ಟಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net