ಬಿರುಗಾಳಿ ಮಳೆಗೆ ರೈತರ ಬದುಕು ದುಸ್ತರ

12mul2
Published on

ಮುಳಗುಂದ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಮಳೆಯಿಂದ ಬೆಳೆಗಳು ಹಾಳಾಗುತ್ತಿವೆ. ಇದರಿಂದ ರೈತರ ಬದುಕು ದುಸ್ತರಗೊಂಡಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮುಳಗುಂದ ವ್ಯಾಪ್ತಿಯಲ್ಲಿ ಬೆಳೆದ ಹೆಸರು, ಗೆಜ್ಜೆಶೇಂಗಾ, ಅಲಸಂದಿ, ಗುರೆಳ್ಳು ಮತ್ತಿತರ ಬೆಳೆಗಳು ಕಟಾವಿಗೆ ಬಂದಿವೆ. ಆದರೀಗ ನಿರಂತರ ಮಳೆಯಿಂದಾಗಿ ಪೈರು ಹಾಳಾಗುತ್ತಿವೆ. ಮುಂಗಾರಿನ ಆರಂಭದಲ್ಲಿ ಬೆಳೆದ ಬಹುವಾರ್ಷಿಕ ಕಬ್ಬು, ಬಾಳೆ ಬೆಳೆಗಳು ಬಿರುಗಾಳಿಗೆ ನೆಲಕ್ಕುರುಳುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹಾಳಾಗುತ್ತಿರುವುದನ್ನು ಕಂಡು ಬೆಳೆಗಾರರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಸೊರಟೂರ ಗ್ರಾಮದ ರೈತ ತಿರಕಪ್ಪ ಬೋಳನವರ ಅವರ ಐದು ಎಕರೆಯಲ್ಲಿ ಬೆಳೆದ ಕಬ್ಬು ಅರ್ಧಕ್ಕಿಂತಲೂ ಹೆಚ್ಚು ಮಳೆ-ಗಾಳಿಯಿಂದ ಬೆಳೆ ನೆಲಕ್ಕುರುಳಿದೆ. ಕಳೆದ ವರ್ಷ ಇಲಿಗಳ ಹಾವಳಿಯಿಂದ ಸಂಪೂರ್ಣ ಬೆಳೆ ನಾಶವಾಗಿದೆ. ಈ ವರ್ಷ ಕಟಾವು ಹಂತದಲ್ಲಿದ್ದಾಗ ನೆಲಕ್ಕುರುಳಿದೆ.

ಫಸಲು, ಭೂಮಿ ಹಾಳು: ಪಟ್ಟಣದ ರೈತ ಪಕ್ಕಣ್ಣ ಸಂಶಿ ಅವರ ಜಮೀನು ಸೇರಿ ಈ ಭಾಗದ ಹೊಲಗಳಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡಿದೆ. ರಭಸದ ನೀರಿಗೆ ಒಡ್ಡು ಕಿತ್ತು ಹೋಗಿ ಜಮೀನಿನ ಮಣ್ಣು ಹರಿದು ಹೋಗಿದೆ. ಒಟ್ಟು ಆರು ಎಕರೆ ಪ್ರದೇಶದಲ್ಲಿ ಗೋವಿನಜೋಳ, ಬಿ.ಟಿ. ಹತ್ತಿ ಬೆಳೆ ಸಂಪೂರ್ಣ ನಾಶವಾಗಿದೆ. ಅಂದಾಜು 60 ಎಕರೆ ಪ್ರದೇಶದಲ್ಲಿನ ನೀರು ಪಕ್ಕಣ್ಣ ಸಂಶಿ ಅವರ ಜಮೀನಿಗೆ ಬರುವುದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ಸಂಕಷ್ಟ ಎದುರಿಸಬೇಕಾದ ಅನಿವಾರ್ಯತೆ ಇರುವುದರಿಂದ ಇಂಥ ಪರಿಸ್ಥಿತಿಯನ್ನು ಹಲವು ರೈತರು ಅನುಭವಿಸಬೇಕಾಗಿರುವುದರಿಂದ ಜಿಲ್ಲಾಡಳಿತ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ. ಪತ್ರಿಕೆಗೆ ತಮ್ಮ ಅಳಲು ಹಂಚಿಕೊಂಡ ರೈತ ಪಕ್ಕಣ್ಣ ಭಾರಿ ಮಳೆಯಾದ ಸಂದರ್ಭದಲ್ಲಿ ಇಂಥ ಪರಿಸ್ಥಿತಿ ನಿರ್ವಣವಾಗುತ್ತಿದ್ದು ಕಷ್ಟಪಟ್ಟು ಬೆಳೆದ ಬೆಳೆ ಹಾಗೂ ಭೂಮಿ ಹಾಳಾಗುತ್ತಿದ್ದು ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಆರು ತಿಂಗಳಿಂದ ಕಷ್ಟಪಟ್ಟು ಬೆಳೆದ ಕಬ್ಬು ಬಿರುಗಾಳಿ, ಸತತ ಮಳೆಯಿಂದ ಹಾನಿಯಾಗಿದೆ. ಕಳೆದ ವರ್ಷ ಬೆಳೆ ಮಾರಲಾಗದ ಪರಿಸ್ಥಿತಿ ನಿರ್ವಣವಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳು ಬಂದು ಬೆಳೆ ಹಾನಿ ಪರಿಶೀಲಿಸಿದ್ದು, ಪರಿಹಾರ ನೀಡಬೇಕು.| ಟಿ.ಜಿ. ಬೋಳನವರ ಸೊರಟೂರ ರೈತ

ಆರು ತಿಂಗಳಿಂದ ಕಷ್ಟಪಟ್ಟು ಬೆಳೆದ ಕಬ್ಬು ಬಿರುಗಾಳಿ, ಸತತ ಮಳೆಯಿಂದ ಹಾನಿಯಾಗಿದೆ. ಕಳೆದ ವರ್ಷ ಬೆಳೆ ಮಾರಲಾಗದ ಪರಿಸ್ಥಿತಿ ನಿರ್ವಣವಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳು ಬಂದು ಬೆಳೆ ಹಾನಿ ಪರಿಶೀಲಿಸಿದ್ದು, ಪರಿಹಾರ ನೀಡಬೇಕು.

| ಟಿ.ಜಿ. ಬೋಳನವರ ಸೊರಟೂರ ರೈತ

========

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net