

ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಕೆರೆಕಲ್ಲಹಳ್ಳಿ, ಹನುಮಂತಪುರ, ದಡ್ಡಿಘಟ್ಟಮಡುಗು ಗ್ರಾಮಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ 5 ಎಕರೆಯಲ್ಲಿ ಕಟಾವಿಗೆ ಬಂದಿದ್ದ ಬಾಳೆ ಫಸಲು ನೆಲಕಚ್ಚಿದೆ.
ತಾಲೂಕಿನ ಸಾಸಲು ಹೋಬಳಿಯ ಕೆರೆಕಲ್ಲಹಳ್ಳಿ ಗ್ರಾಮದ ಸುರೇಶ್ ಅವರ 2 ಎಕರೆ ಬಾಳೆ ಫಸಲು ಸಂಪೂರ್ಣ ನೆಲಕಚ್ಚಿದೆ. ಹನುಮಂತಪುರದ ಮಂಜುನಾಥ ಅವರ 3 ಎಕರೆ ಪ್ರದೇಶದಲ್ಲಿದ್ದ ಏಲಕ್ಕಿ ಬಾಳೆ ತೋಟ ಸಂಪೂರ್ಣ ಹಾಳಾಗಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ತೆಂಗು ಹಾಗೂ ಅಡಿಕೆ ಮರಗಳು ಕೂಡ ಧರಶಾಹಿಯಾಗಿವೆ.
ಹಾರಿಹೋದ ಶೀಟ್ ಗಳು: ದಡಿಘಟ್ಟಮಡುಗು ಗ್ರಾಮದ ನಾಗಲಕ್ಷ್ಮಮ್ಮ ಅವರ ಮನೆಯ ಛಾವಣಿ ಬಿರುಗಾಳಿ ರಭಸಕ್ಕೆ ಹಾರಿದೆ. ಇದರಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ದವಸ-ಧಾನ್ಯ, ಟಿವಿ ಮತ್ತಿತರ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಇದೇ ಗ್ರಾಮದ ಹನುಮಂತರಾಜು ಅವರ ಮಾಳಿಗೆ ಮನೆಯ ಗೋಡೆ ಕುಸಿದಿದೆ.
ಬಿರುಗಾಳಿ ಸಹಿತ ಭಾರಿ ಮಳೆಗೆ ಸಾಸಲು ಹೋಬಳಿಯ ಸಾಕಷ್ಟು ಗ್ರಾಮಗಳಲ್ಲಿ ಹಾನಿಯಾಗಿದೆ. ಬಾಳೆ ತೋಟ ಸೇರಿ ಅನೇಕ ಬೆಳೆಗಳು ಕೊಚ್ಚಿಹೋಗಿವೆ. ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಸಂಬಂಧಪಟ್ಟ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ದೊರಕಿಸಿಕೊಡುತ್ತೇನೆ. ವೆಂಕಟಶಾಮಶೆಟ್ಟಿ, ಸಾಸಲು ಹೋಬಳಿ ಕಂದಾಯ ಅಧಿಕಾರಿ