

ಬೆಂಗಳೂರು : ಬಿಬಿಎಂಪಿ ವತಿಯಿಂದ ಕೈಗೊಂಡ ಎಲ್ಲ ಕಾಮಗಾರಿಗಳನ್ನು ಪಾಲಿಕೆ ಜಾಲತಾಣದಲ್ಲಿ ಅಪ್‌ಡೇಟ್ ಮಾಡಲಾಗಿದ್ದು, ಸಾರ್ವಜನಿಕರು ಮಾಹಿತಿ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ತೆರಿಗೆ ಪಾವತಿಸುವ ಜನರಿಗೆ ತಮ್ಮಹಣ ಯಾವ ಕಾಮಗಾರಿಗೆ ಬಳಕೆ ಮಾಡಲಾಗಿದೆ ಎಂದು ಮಾಹಿತಿ ಒದಗಿಸುವುದು ಪಾಲಿಕೆ ಜವಾಬ್ದಾರಿಯಾಗಿದೆ. ಹೀಗಾಗಿ, 2015 ಜೂನ್‌ನಿಂದ ಈವರೆಗಿನ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇದರಿಂದಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವ ಪ್ರಶ್ನೆಗಳಿಗೆ ಜಾಲತಾಣದಲ್ಲಿಯೇ ಉತ್ತರ ಲಭ್ಯವಾಗಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಭಿಪ್ರಾಯ ತಿಳಿಸಲು ಅವಕಾಶ: ಪಾಲಿಕೆ ಜಾಲತಾಣ ಆರಂಭಿಸಿದ ನಂತರ ‘ನಾಗರಿಕ ಸೇವೆ’ ಆಯ್ಕೆ ಮಾಡಿದಲ್ಲಿ, ಅದರಲ್ಲಿ ವಾರ್ಡ್ ಸಂಖ್ಯೆ ನಮೂದಿಸಿದರೆ ಅಲ್ಲಿ ಕೈಗೊಂಡ ಎಲ್ಲ ಕಾಮಗಾರಿಗಳ ಕುರಿತು ಮಾಹಿತಿ ತೆರೆದುಕೊಳ್ಳಲಿದೆ. ಆಯಾ ಕಾಮಗಾರಿಗಳ ವಿವರ, ಬಿಲ್ ಪಾವತಿ, ಜಾಬ್ ಕೋಡ್, ಯೋಜನೆಯ ರೂಪುರೇಷೆ, ಕಾರ್ಯಾದೇಶ, ಅಳತೆ ಪುಸ್ತಕ, ಕಾಮಗಾರಿ ಹೆಸರು ಮತ್ತು ಛಾಯಾಚಿತ್ರ ಮಾಹಿತಿ ಲಭ್ಯವಾಗುತ್ತದೆ. ಮುದ್ರಿತ ಪ್ರತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಕಾಮಗಾರಿ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ದೂರುಗಳಿದ್ದಲ್ಲಿ ಸಂಬಂಧಿಸಿದ ಇಂಜಿನಿಯರ್‌ಗಳು ವಾರದೊಳಗೆ ಸ್ಥಳ ಪರಿಶೀಲನೆ ನಡೆಸಿ ಉತ್ತರಿಸಲಿದ್ದಾರೆ ಎಂದು ವಿವರಿಸಿದರು.
ಇನ್ನಷ್ಟು ಮಾಹಿತಿ ನೀಡಲು ಬದ್ಧ: ಪ್ರಸ್ತುತ ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಸಿವಿಲ್ ಕಾಮಗಾರಿಗಳ ಬಗ್ಗೆ ಮಾತ್ರ ಪಾರದರ್ಶಕವಾಗಿ ಮಾಹಿತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನ, ನಗರೋತ್ಥಾನ ಸೇರಿ ಎಲ್ಲ ವಿಧದ ಹಣ ಬಳಕೆ ಕುರಿತು ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಪಾಲಿಕೆ ಜಾಲತಾಣ ಪರಿಷ್ಕೃತಗೊಳಿಸಿ ನವೀಕರಣ ಮಾಡಲಾಗಿದ್ದು, ಎಲ್ಲ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ತಿಳಿಸಿದರು.
ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ, ಅಪರ ಆಯುಕ್ತ ನಾಗರಾಜ್ ಸೆರೇಗಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ತರಾಟೆ ತೆಗೆದುಕೊಂಡಿದ್ದ ಹೈಕೋರ್ಟ್ : ಪಾಲಿಕೆ ಕಾಮಗಾರಿಗಳ ಕುರಿತು ಸಮರ್ಪಕ ಮಾಹಿತಿ ನೀಡದೆ ಪಾರದರ್ಶಕತೆ ಕೊರತೆ ಕಂಡುಬರುತ್ತಿದೆ. ಇದರಿಂದಾಗಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರೆ ಎಂದು ದೂರು ಕೇಳಿಬಂದಿದ್ದವು. ಪಾಲಿಕೆ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವಂತೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು.