

ಚಿಕ್ಕಬಳ್ಳಾಪುರ: ಸುಳ್ಳು ದಾಖಲೆ ಸೃಷ್ಟಿ ಹಾಗೂ ಪ್ರಭಾವ ಬಳಸಿ ಪಡೆದುಕೊಂಡಿರುವ ಬಿಪಿಎಲ್ ಪಡಿತರ ಚೀಟಿಯನ್ನು ಜೂ.30ರೊಳಗೆ ವಾಪಸ್ ನೀಡಬೇಕೆಂಬ ಆಹಾರ ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರ ಇಲಾಖೆಯ ಎಚ್ಚರಿಕೆಯನ್ನು ಅನರ್ಹರು ನಿರ್ಲಕ್ಷಿಸಿದಂತೆಕಾಣುತ್ತಿದ್ದು, ಈವರೆಗೆ ಕೇವಲ 202 ಪಡಿತರ ಚೀಟಿಗಳನ್ನು ಹಿಂಪಡೆಯಲಾಗಿದೆ.
ಜಿಲ್ಲೆಯಲ್ಲಿ 3,21,428 ಪಡಿತರ ಚೀಟಿಗಳನ್ನು ವಿತರಿಸಿದ್ದು 10,66,66,875 ಫಲಾನುಭವಿಗಳಿದ್ದಾರೆ. ಇದರ ಪೈಕಿ ಅಂತ್ಯೋದಯ 28,433 ಚೀಟಿಗಳಿಂದ 1,26,139 ಫಲಾನುಭವಿಗಳು, 2,77,376 ಬಿಪಿಎಲ್ ಚೀಟಿಗಳಿಂದ 8,88,369 ಹಾಗೂ ಎಪಿಎಲ್ 15,619 ಕಾರ್ಡ್‌ಗಳಿಂದ 52,367 ಫಲಾನುಭವಿಗಳು ಇದ್ದಾರೆ.
ಆದರೆ ಬಡವರ ಹೆಸರಲ್ಲಿ ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು ಪ್ರಭಾವ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವ, ಪಡಿತರ ಪದಾರ್ಥಗಳನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಈಗಾಗಲೇ ಹಲವು ಬಾರಿ ಇಲಾಖೆಯು ಅನರ್ಹರಿಗೆ ಪಡಿತರ ಚೀಟಿ ವಾಪಸ್ ನೀಡಲು ಸೂಚಿಸಿದೆಯಾದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾವಿರಾರು ಲೆಕ್ಕದಲ್ಲಿ ಅನರ್ಹರಿದ್ದರೂ 100 ರಿಂದ 200 ಅಕ್ರಮ ಪಡಿತರ ಚೀಟಿಗಳು ಬೆಳಕಿಗೆ ಬರುತ್ತಿವೆ. ಇದರ ನಡುವೆ ಜೂ.30 ರೊಳಗೆ ಅಂತಿಮ ಎಚ್ಚರಿಕೆ ನೀಡಿದ್ದು 202 ಕಾರ್ಡ್‌ಗಳನ್ನು ಮಾತ್ರ ಒಪ್ಪಿಸಲಾಗಿದೆ.
ಅನರ್ಹರ ಪತ್ತೆಗೆ ಹರಸಾಹಸ: ಅನರ್ಹರ ಪತ್ತೆಗೆ ಇಲಾಖೆ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ಅಕ್ರಮವಾಗಿ ಪಡೆದಿರುವ ಕಾರ್ಡ್‌ನ್ನು ಸ್ವಯಂ ಪ್ರೇರಣೆಯಿಂದ ವಾಪಸ್ ಕೊಟ್ಟರೆ ಯಾವುದೇ ಶಿಕ್ಷೆ ಇಲ್ಲ ಎಂಬುದನ್ನು ಹೇಳಲಾಗಿದೆ. ಜತೆಗೆ ಅನರ್ಹ ಪಡಿತರ ಚೀಟಿಗಳ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುತ್ತಿದೆ. ಇವೆಲ್ಲದರ ನಡುವೆಯೂ ಕೆಲವರು ರಾಜಾರೋಷವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಸಿಕ್ಕಿಹಾಕಿಕೊಂಡರೂ ಪ್ರಭಾವಿಗಳ ನೆರಳಿನಲ್ಲಿ ತಪ್ಪಿಸಿಕೊಳ್ಳುತ್ತಿದ್ದಾರೆ.
ಬಡವರ ಅನ್ನಕ್ಕೆ ಕಲ್ಲು: ಅನರ್ಹರ ವಿರುದ್ಧದ ಕಾರ್ಯಾಚರಣೆ ನೆಪದಲ್ಲಿ ಸಮರ್ಪಕ ದಾಖಲೆಗಳನ್ನು ಹೊಂದಿದ್ದರೂ ಪರಿಶೀಲನೆ ವಿಳಂಬ, ದಾಖಲೆ ಸಲ್ಲಿಕೆಯಾಗಿಲ್ಲ ಎಂಬ ಕಾರಣಗಳನ್ನು ಹೇಳಿಕೊಂಡು ಪಡಿತರ ಚೀಟಿ ರದ್ದುಪಡಿಸಿ ಬಡವರ ಅನ್ನಕ್ಕೆ ಕಲ್ಲುಹಾಕಿರುವ ಪ್ರಕರಣಗಳಿಗೆ ಲೆಕ್ಕವಿಲ್ಲ. ಹಲವರು ಕಚೇರಿಗೆ ಅಲೆದಾಡಿ ಹೈರಾಣರಾಗುತ್ತಿದ್ದಾರೆ. ಅರ್ಹತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ.
ವಾಪಸಾದ ಚೀಟಿಗಳು : ಬಾಗೇಪಲ್ಲಿ ತಾಲೂಕಿನಲ್ಲಿ 60, ಚಿಕ್ಕಬಳ್ಳಾಪುರದಲ್ಲಿ 40, ಚಿಂತಾಮಣಿಯಲ್ಲಿ 14, ಗೌರಿಬಿದನೂರಿನಲ್ಲಿ 16, ಗುಡಿಬಂಡೆಯಲ್ಲಿ 5 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 67 ಸೇರಿ 202 ಬಿಪಿಎಲ್ ಪಡಿತರ ಚೀಟಿಗಳು ವಾಪಾಸಾಗಿವೆ.
ಅನರ್ಹರು ಅಕ್ರಮವಾಗಿ ಪಡೆದಿರುವ ಬಿಪಿಎಲ್ ಕಾರ್ಡ್‌ಗಳನ್ನು ಇಲಾಖೆಗೆ ಒಪ್ಪಿಸಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ. ಸವಿತಾ, ಉಪ ನಿರ್ದೇಶಕಿ, ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕರ ವ್ಯವಹಾರ ಇಲಾಖೆ, ಚಿಕ್ಕಬಳ್ಳಾಪುರ