

ಬೀದರ್: ಕೆಎಸ್‌ಸಿಎ ರಾಯಚೂರು ವಲಯ ಹಮ್ಮಿಕೊಂಡ ೧೬ ವರ್ಷದೊಳಗಿನ ಕ್ರಿಕೆಟ್ ಪಂದ್ಯದಲ್ಲಿ ಬುಧವಾರ ರೋಜರ್ ಬಿನ್ನಿ ಮತ್ತು ಜಿ.ಆರ್.ವಿಶ್ವನಾಥ ತಂಡ ಗೆಲುವು ಸಾಧಿಸಿವೆ.
ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಎರಪಲ್ಲಿ ಪ್ರಸನ್ನ ಮತ್ತು ರೋಜರ್ ಬಿನ್ನಿ ಮಧ್ಯೆ ಪಂದ್ಯದಲ್ಲಿ ಅರ್ಪಿತ್ ಎನ್. ಆಲ್‌ರೌಂಡ್ ಆಟ ಪ್ರದರ್ಶನದಿಂದ ಬಿನ್ನಿ ತಂಡ ಗೆಲುವು ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಕಾಯ್ದುಕೊಂಡ ಎರಪಲ್ಲಿ ಪ್ರಸನ್ನ ತಂಡ ೩೫ ಓವರ್‌ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು ೧೧೮ ರನ್ ಗಳಿಸಿತು. ಎದುರಾಳಿ ತಂಡದ ಬೌಲರ್ ಅರ್ಪಿತ್ ಎನ್. ಎರಡು ಓವರ್‌ಗಳಲ್ಲಿ ನಾಲ್ಕು ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಕಬಳಿಸಿ ಕಡಿವಾಣ ಹಾಕಿದರು.
ನಂತರ ಆರಂಭಿಕ ಆಟಗಾರನಾಗಿ ಬ್ಯಾಟಿಂಗ್‌ಗೆ ಇಳಿದ ಬಿನ್ನಿ ತಂಡದ ಅರ್ಪಿತ್ ಎನ್. ಔಟ್ ಆಗದೆ ೬೧ ರನ್ ಗಳಿಸಿ ತನ್ನ ತಂಡಕ್ಕೆ ಗೆಲುವಿನ ದಡ ಸೇರಿಸಿದರು. ಕೇವಲ ೨೩.೩ ಓವರ್‌ಗಳಲ್ಲಿ ೧೧೯ ರನ್ನು ಗಳಿಸಿ ಗೆಲುವಿನ ಕೇಕೆ ಹಾಕಿದರು. ಎದುರಾಳಿ ತಂಡದ ಬಾಲಿಂಗ್ ವಿಭಾಗದಲ್ಲಿ ಕಾರ್ತಿಕ್ ದುಬಾರಿಯಾದರೂ ಎರಡು ವಿಕೆಟ್ ಗಳಿಸುವಲ್ಲಿ ಸಫಲರಾದರು.
ವಿಶ್ವನಾಥ ತಂಡಕ್ಕೆ ಗೆಲುವು
ಬುಧವಾರ ಹುಮನಾಬಾದ್ ಬಳಿಯ ಮಾಣಿಕನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿ.ಆರ್.ವಿಶ್ವನಾಥ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ. ಆರಂಭಿಕ ಆಟಗಾರರಾಗಿ ಬ್ಯಾಟಿಂಗ್‌ಗೆ ಇಳಿದ ದತ್ತಾತ್ರೇಯ ಜಾಧವ್ (೫೦) ಮತ್ತು ತರುಣ್ ರಾಜಪುತ (೨೮) ಉತ್ತಮ ಜತೆಯಾಟದಿಂದ ವಿಶ್ವನಾಥ ತಂಡ ನಿಗದಿತ ೫೦ ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ ೧೬೬ ರನ್ ಗಳಿಸಿತು.
ನಂತರ ಬ್ಯಾಟಿಂಗ್ ಮಾಡಿದ ಬಿ.ಎಸ್. ಚಂದ್ರಶೇಖರ ತಂಡ ೧೨೭ ರನ್ ಗಳಿಸಿ ಸೋಲನುಭವಿಸಿತು. ವಿಶ್ವನಾಥ ತಂಡದ ಸಮರ್ಥ ಕುಲಕರ್ಣಿ ೧೦ ಓವರ್‌ಗಳಲ್ಲಿ ೩೪ ರನ್ನು ನೀಡಿ ಏಳು ವಿಕೆಟ್ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.