

ಬೀದರ್: ಇಲ್ಲಿಯ ಪಾರಂಪರಿಕ ಮತ್ತು ವಿಶ್ವ ಪ್ರಸಿದ್ಧ ಬಿದ್ರಿ ಕಲೆಗೆ ಉತ್ತೇಜನ ನೀಡುವ ಜತೆಗೆ ಈ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಬಂದ ಕಲಾವಿದರ ಕಲ್ಯಾಣ ಕಾರ್ಯಕ್ರಮ ರೂಪಿಸುವ ಸಂಬಂಧ ಜಿಲ್ಲಾಡಳಿತ ವಿಶೇಷ ಕಾರ್ಯಯೋಜನೆ ರೂಪಿಸಲು ಮುಂದಾಗಿದೆ.
ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಕೆ. ರತ್ನಪ್ರಭಾ ಅವರೊಂದಿಗೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಇಲ್ಲಿ ವಿಡಿಯೋ ಸಂವಾದ ನಡೆಸಿ ಈ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದರು. ಸಂವಾದ ಬಳಿಕ ಡಿಸಿಯವರು ಸ್ಥಳೀಯ ಪ್ರಮುಖ ಬಿದ್ರಿ ಕರುಕುಶಲಗಾರ ಜತೆಗೆ ಸಭೆಯನ್ನೂ ನಡೆಸಿದರು.
ಈ ಹಿಂದೆ ಬೀದರ್ ಎಸಿಯಾಗಿ, ಜಿಲ್ಲಾಧಿಕಾರಿ ಆಗಿ ಕೆಲಸ ಮಾಡಿದ ರತ್ನಪ್ರಭಾ ಅವರು ಬಿದ್ರಿ ಕಲೆ ವಿಶೇಷತೆ ಚೆನ್ನಾಗಿ ಅರಿತಿದ್ದಾರೆ. ವಿಡಿಯೋ ಸಂವಾದದ ವೇಳೆ ಅವರು ಡಿಸಿ ಅವರಲ್ಲದೇ ಬಿದ್ರಿ ಕಲೆಯ ಕರಕುಶಲಗಾರರೊಂದಿಗೂ ನೇರವಾಗಿ ಮಾತನಾಡಿ ಹಲವಾರು ಮಾಹಿತಿ ಪಡೆದರು. ಬಿದ್ರಿ ಕಲೆ ಉತ್ತೇಜನದ ಜತೆಗೆ ಕಲಾವಿದರ ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆಸಿದರು.
ಹಿರಿಯ ಕರಕುಶಲಗಾರ ರೆಹಮತ್ ಉಲ್ಲಾ ಹುಸೇನಿ ರೇಕುಳಗಿ ಸೇರಿದಂತೆ ಹಲವು ಕಲಾವಿದರು ಮಾತನಾಡಿ, ಬಿದ್ರಿ ಕಲಾಕೃತಿಗಳ ಕಾರ್ಯ ಅತ್ಯಂತ ಸೂಕ್ಷ್ಮವಾಗಿದೆ. ಇದರಿಂದ ಕಣ್ಣಿಗೆ ಸಾಕಷ್ಟು ಹಾನಿಯಾಗುತ್ತದೆ. ಹೀಗಾಗಿ ನೇತ್ರ ಚಿಕಿತ್ಸೆಗೆ ಅನುಕೂಲ ಕಲ್ಪಿಸಬೇಕೆಂದು ಕೋರಿದರು. ಕಲಾವಿದರಿಗೆ ಪ್ರೋತ್ಸಾಹ ಧನ, ಕಚ್ಚಾ ವಸ್ತು ಪೂರೈಕೆ, ಸೂಕ್ತ ಮಾರುಕಟ್ಟೆ ಮುಂತಾದ ವಿಷಯ ಬಗ್ಗೆ ಗಮನ ಸೆಳೆದರು.
ಎರಡು ಸಾವಿರ ಕಲಾ ಪ್ರಕಾರದ ಬಿದ್ರಿ ಕಲಾಕೃತಿಗಳ ಪ್ರದರ್ಶನಕ್ಕೆ ಸ್ಥಳವಕಾಶ ಕಲ್ಪಿಸುವ ಬಗ್ಗೆ ಮತ್ತು ಪಾರಂಪರಿಕ ಬಿದ್ರಿ ಕಲೆ ವಿಷಯ ಪಠ್ಯಕ್ಕೆ ಸೇರ್ಪಡೆಗೊಳಿಸಿ ತರಬೇತಿ ನೀಡುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ರತ್ನಪ್ರಭಾ ಅವರು, ಬಿದ್ರಿ ಕಲೆಗೆ ವಿಶೇಷ ತರಬೇತಿ ಮತ್ತು ತರಬೇತಿ ಹೊಂದುವ ಕಲಾವಿದರಿಗೆ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲು, ಕರಕುಶಲಗಾರರಿಗೆ ಬ್ಯಾಂಕ್ ಗಳಿಂದ ಸುಲಭ ಸಾಲ ಸಿಗುವ ವ್ಯವಸ್ಥೆ ಮಾಡಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಹಾಯಕ ಆಯುಕ್ತೆ ಗರೀಮಾ ಪನ್ವಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ಬರ್ ಖಾನ್, ಕೌಶಲ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಎಂ.ಬೇಬಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ, ಬಿದ್ರಿ ಆರ್ಟಿಸಂ ಅಶೋಸಿಯೇಷನ್ ಅಧ್ಯಕ್ಷ ಮಹ್ಮದ್ ಸಲಿಯುದ್ದೀನ್, ಕಾರ್ಯದರ್ಶಿ ಸೈಯದ್ ಎಂ.ಡಿ., ಸದಸ್ಯರಾದ ಉಬೇದುಲ್ಲಾ ಖಾನ್, ಮಹ್ಮದ್ ಸಲಾವುದ್ದಿನ್, ಸುನೀಲಕುಮಾರ, ಇದ್ರಿಜ್, ಅಬ್ದುಲ್ ಸಮದ್, ಮಹ್ಮದ್ ನದೀಮ್ ಇತರರಿದ್ದರು.
ಕಲಾವಿದರೊಂದಿಗೂ ಸಭೆ
ವಿಡಿಯೋ ಸಂವಾದದ ಬಳಿ ಡಿಸಿ ರಾಮಚಂದ್ರನ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಬಿದ್ರಿ ಕಲಾವಿದರ ಸಭೆ ನಡೆಯಿತು. ಬಿದ್ರಿ ಕಲಾಕೃತಿಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ, ಕಲಾವಿದರಿಗೆ ಸಹಾಯಧನ, ಹೊಸ ಕಲಾವಿದರಿಗೆ ಕಲಾಕೃತಿಗಳ ಪರಿಚಯಿಸುವುದು, ಬಿದ್ರಿ ಕಲೆಗೆ ವಿಶೇಷ ತರಬೇತಿ ಏರ್ಪಾಡು, ಕುಶಲಕರ್ಮಿಗಳಿಗೆ ಜಮೀನು ನೀಡುವುದು, ಬಿದ್ರಿ ವಸ್ತುಗಳ ಸಂಗ್ರಹಾಲಯ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಬಿದ್ರಿ ಕಲಾಕೃತಿಗಳ ಪ್ರದರ್ಶನ ಮತ್ತು ವಿಶೇಷ ಪ್ರಚಾರ ನೀಡುವುದು ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲಾಯಿತು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಕಲಾವಿದರಿಗೆ 1 ಲಕ್ಷ ರೂ. ಸಹಾಯ ಧನ ಒದಗಿಸುವುದು, ಬಿದ್ರಿ ಕಲಾಕೃತಿಗಳಿಗೆ ವಿಶೇಷ ವೆಬ್ ಸೈಟ್ ರಚನೆ, ಕಲಾವಿದರಿಗೆ ಮಾಸಾಶನ ಅದಾಲತ್, ಆರೋಗ್ಯ ಕಾರ್ಯಕ್ರಮ ರೂಪಿಸಿ ಬಿದ್ರಿ ಕಲೆಯ ಕಸುಬುದಾರರಿಗೆ ಅನುಕೂಲ ಕಲ್ಪಿಸಿಕೊಡುವ ಬಗ್ಗೆಯೂ ಸಮಾಲೋಚನೆ ನಡೆಯಿತು.
ಕರ್ನಾಟಕ ಕಿರೀಟಪ್ರಾಯ ಬೀದರ್ ಜಿಲ್ಲೆಗೆ ಬಿದ್ರಿ ಕಲೆಯಿಂದಲೂ ವಿಶೇಷ ಮಾನ್ಯತೆ ಸಿಕ್ಕಿದೆ. ಈ ಕಲೆಗೆ ಪುನಶ್ಚೇತನ ಕೊಡಲು ಮತ್ತು ಈ ಕಸುಬನ್ನೇ ನಂಬಿ ಬದುಕು ನಡೆಸುವ ಕರಕುಶಲಗಾರರ ಹಿತದೃಷ್ಟಿಯಿಂದ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಕರಕುಶಲಗಾರರ ಬೇಡಿಕೆಯಂತೆ 2 ಸಾವಿರಕ್ಕೂ ಹೆಚ್ಚಿನ ಬಿದ್ರಿ ಕಲಾಕೃತಿಗಳ ಪ್ರದರ್ಶನ, ಮಾರಾಟಕ್ಕೆ ಸ್ಥಳವಕಾಶ ಕಲ್ಪಿಸಲಾಗುವುದು.| ರಾಮಚಂದ್ರನ್, ಜಿಲ್ಲಾಧಿಕಾರಿ