ಬಿದಿರಕ್ಕ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ

21-10-HNPP 01
ಹೊಳೆನರಸೀಪುರ ತಾಲೂಕಿನ ಬಿದಿರಕ್ಕ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಜಲಜೀವನ್ ಯೋಜನೆಯಡಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಜಲಜೀವನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
Published on

ಹೊಳೆನರಸೀಪುರ: ಬಿದಿರಕ್ಕ ಗ್ರಾಮಕ್ಕೆ ಕಾವೇರಿ ನದಿಯಿಂದ ನೀರೆತ್ತಿ, ಅದನ್ನು ಶುದ್ಧಗೊಳಿಸಿ ಕೊಡಲಾಗುತ್ತಿದೆ ಎಂದು ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ತಾಲೂಕಿನ ಬಿದಿರಕ್ಕ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 2.10 ಕೋಟಿ ರೂ.ವೆಚ್ಚದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿರುವ ಎಲ್ಲ ಮನೆಗಳಿಗೆ ನಲ್ಲಿ ಅಳವಡಿಸಲು ಓವರ್‌ಹೆಡ್ ಟ್ಯಾಂಕಿನಿಂದ ಸುಮಾರು 15 ಸಾವಿರ ಮೀಟರ್ ನಷ್ಟು ಪೈಪು ಆಳವಡಿಸಿ ಶುದ್ಧ ಕುಡಿಯುವ ನೀರಿನ ಸಂಪರ್ಕ ನೀಡಲಾಗುತ್ತಿದೆ ಎಂದರು.

ಇಲ್ಲಿಯವರೆಗೆ ಬಿದಿರಕ್ಕ ಮತ್ತು ಶಿಡ್ಲಹಳ್ಳಿ ಗ್ರಾಮಗಳಲ್ಲಿ ವಾಸಿಸುವ ಜನರು ಬೋರ್‌ವೆಲ್, ಕೆರೆ, ನಾಲೆ ನೀರನ್ನು ಉಪಯೋಗಿಸುತ್ತಿದ್ದರು. ಇದರಿಂದ ನಿವಾಸಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರು. ಇದನ್ನು ಗಮನಿಸಿದ ಸರ್ಕಾರ ರಾಜ್ಯದಲ್ಲಿರುವ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ನೀಡುತ್ತಿದ್ದು, ಅದನ್ನು ಇದೀಗ ನಮ್ಮ ಕ್ಷೇತ್ರದಲ್ಲಿನ ಗ್ರಾಮಗಳಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದರು.

ಇಂದು ಶಿಡ್ಲಹಳ್ಳಿ, ಬಿದಿರಕ್ಕ, ಬಿದರಕ್ಕ ಕೊಪ್ಪಲು , ಕೋಗಿಲಹಳ್ಳಿ ಹಾಗೂ ಸೋಮನಹಳ್ಳಿ ಕೊಪ್ಪಲುಗಳಲ್ಲಿ 930 ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದಕ್ಕೆ ಒಟ್ಟು 3.73 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ನೀರು ವಿತರಣಾ ಇಲಾಖೆಯ ಅಧಿಕಾರಿ ಪ್ರಶಾಂತ್, ತಾಲೂಕು ಪಂಚಾಯಿತಿ ಅಧಿಕಾರಿ ಗೋಪಾಲ್ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net