

ದೇವನಹಳ್ಳಿ: ತಾಲೂಕಿನ ಬಿದಲೂರಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಅಭಿಯಾನವು ಗದ್ದಲ, ಗಲಾಟೆ, ಗೊಂದಲದ ಗೂಡಾಗಿ ಪರಿಣಮಿಸಿತು.
ಮಧ್ಯಾಹ್ನ 12ಕ್ಕೆ ಆಗಮಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಚನ್ನಕೇಶವ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಸರ್ಕಾರಿ ಹಿರಿಯ ಪಾಥಮಿಕ ಶಾಲೆ ಆವರಣದ ವೇದಿಕೆಗೆ ಕರೆತರಲಾಯಿತು.
ಮೆರವಣಿಯಲ್ಲಿ ಆಗಮಿಸುವ ಶಾಲೆಯ ಗೇಟ್ ಬಳಿ ಜಮಾಯಿಸಿದ್ದ ಬಿಜೆಪಿ ಮುಖಂಡರಾದ ಮುನಿಕೃಷ್ಣಪ್ಪ, ತಮ್ಮಯ್ಯ ಹಾಗೂ ಮುನಿರಾಜು ಮತ್ತಿತರರು ಶಾಸಕರು ಹಾಗೂ ತಹಸೀಲ್ದಾರ್ ಅವರನ್ನು ತಡೆದರು. ಇದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ. ನಮ್ಮ ಅಹವಾಲು ಸ್ವೀಕರಿಸುವುದಕ್ಕೆ ಜಿಲ್ಲಾಧಿಕಾರಿಗಳೇ ಆಗಮಿಸಬೇಕು ಎಂದು ಪಟ್ಟು ಹಿಡಿದರು. ಇಲ್ಲವೇ ತಾಲೂಕು ಆಡಳಿತ ನಡೆ ಹಳ್ಳಿಯ ಕಡೆ ಎಂದು ಬ್ಯಾನರ್ ಬದಲಿಸಬೇಕು ಆಗ್ರಹಿಸಿದರು. ಗ್ರಾಮಕ್ಕೆ ಶಾಸಕ ಕೊಡುಗೆ ಏನು ಎಂದು ಪ್ರಶ್ನಿಸಿದರು. ಗ್ರಾಮಸ್ಥರು ಎಲ್ಲರನ್ನೂ ಸಮಾಧಾನ ಪಡಿಸಿ ಕಾರ್ಯಕ್ರಮ ಮುಂದುವರಿಯಲು ಅನುವು ಮಾಡಿದರು.
ಎಲ್ಲದಕ್ಕೂ ನನ್ನನ್ನೇ ಹೊಣೆ ಮಾಡದಿರಿ: ಜಿಲ್ಲಾಧಿಕಾರಿ ಅವರು ಸೂಲಿಬೆಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರಣಕ್ಕಾಗಿ ಬಿದಲೂರಿಗೆ ಆಗಮಿಸಿಲ್ಲ. ಹಾಗಾಗಿ ಅಧಿಕಾರಿಗಳು, ನಾವು ಆಗಮಿಸಿದ್ದೇವೆ. ಗ್ರಾಮದ ಜಲ್ವಂತ ಸಮಸ್ಯೆಗಳಿಗೆ ಗ್ರಾಪಂ, ತಾಪಂ, ಜಿಪಂ ಮೂಲಕ ಬಗೆಹರಿಯದಿರುವ ಸಮಸ್ಯೆಯನ್ನು ನನ್ನ ಗಮನಕ್ಕೆ ತರಬೇಕು. ಎಲ್ಲದಕ್ಕೂ ನನ್ನನ್ನೇ ಹೊಣೆಗಾರನಾಗಿ ಮಾಡುವುದು ಎಷ್ಟು ಸರಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಪ್ರಶ್ನಿಸಿದರು.
ನಾನು ಶಾಸಕರಾದ ಬಳಿಕ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ 10 ಲಕ್ಷ ರೂ., ಡಾಂಬರಿಕರಣಕ್ಕೆ 30 ಲಕ್ಷ ರೂ., ವಡೇರಹಳ್ಳಿ ಪೈಪ್‌ಲೈನ್‌ಗೆ 4 ಲಕ್ಷ ರೂ. ಅನುದಾನ ನೀಡಿದ್ದು, ಗ್ರಾಮದ 16 ಮನೆಗೆ ಹಕ್ಕುಪತ್ರ ನೀಡಿದ್ದೇನೆ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅತಿಹೆಚ್ಚು ಅನುದಾನ ಕೊಡಿಸಿದ ಶಾಸಕರ ಪೈಕಿ ನಾನು ಒಬ್ಬ. ಅಭಿವೃದ್ಧಿ ಕಾಮಗಾರಿ ಮಾಡಿದರು ಕೂಡ ಪಟ್ಟಭದ್ರ ಹಿತಾಸಕ್ತಿಗಳು ನನ್ನ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದರು.
ವರ್ಷದಿಂದ ಗ್ರಾಮಸಭೆ ನಡೆದಿಲ್ಲ: ಗ್ರಾಮದ ಸಮೀಪ ಖಾಸಗಿ ವ್ಯಕ್ತಿಗಳು ರಸ್ತೆ ಮುಚ್ಚಿದ್ದಾರೆ. ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಧೂಳು ಹೆಚ್ಚಾಗಿದೆ. ಸಿಡಿಮದ್ದು ಸಿಡಿಸುವುದರಿಂದ ಮನೆಗಳು ಬಿರುಕು ಬಿಡುತ್ತಿವೆ. ವರ್ಷದಿಂದ ಗ್ರಾಮಸಭೆ ಮಾಡಿಲ್ಲ ಎಂದು ಗ್ರಾಮಸ್ಥ ಮನಿರಾಜು ಗಮನಸೆಳೆದರು. ಇದೇ ತಿಂಗಳಲ್ಲಿ ಗ್ರಾಮಸಭೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಜಲ್ಲಿ ಕಲ್ಲು ತೆಗೆಯಲು ಕೇಂದ್ರದ ಅಧಿಕಾರಿಗಳೇ ಅನುಮತಿ ನೀಡಿದ್ದಾರೆ. ಇದರಲ್ಲಿ ಸ್ಥಳೀಯ ಅಧಿಕಾರಿಗಳ ಪಾತ್ರವಿಲ್ಲ ಎಂದರು.
ಕಾರ್ಯಕ್ರಮದ ನಿಮಿತ್ತ ದಿನಪೂರ್ತಿ ಗ್ರಾಮದಲ್ಲಿಯೇ ಇರುತ್ತೇವೆ. ಅಹವಾಲು, ಕುಂದುಕೊರತೆ ಆಲಿಸಿ, ಪರಿಹಾರ ಕಲ್ಪಿಸಲಾಗುವುದು ಎಂದು ತಹಸೀಲ್ದಾರ್ ಶಿವರಾಜ್ ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ನಾಗೇಗೌಡ, ಗ್ರಾಪಂ ಸದಸ್ಯರಾದ ಕೆ.ವಿ. ಮಂಜುನಾಥ್, ಪ್ರಕಾಶ್, ಎಸ್.ಪಿ. ಮುನಿರಾಜ್, ವಿನಯಕುಮಾರ್, ನಾಗರಾಜ್, ಬಿ.ಎಸ್. ನಂದಕುಮಾರ್, ವರಲಕ್ಷ್ಮೀ, ನರಸಮ್ಮ, ಜ್ಞಾನೇಶ್ವರಿ, ರಾಜು, ಚಂದ್ರಕಲಾ, ಅನುರಾಧಾ, ಪ್ರದೀಪ್, ನಂಜೇಗೌಡ, ಅಶ್ವತ್ಥಮ್ಮ, ಅನಿತಾ, ವಿಮಲಾ, ಚಿಕ್ಕನಾರಾಯಣ ಸ್ವಾಮಿ, ಪಿಡಿಒ ಸಿದ್ದರಾಜು ಇತರರು ಇದ್ದರು.