

ಮೂಡಿಗೆರೆ: ಬಿದರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ 13.61 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ.7 ಡಿವಿಡೆಂಡ್ ಘೋಷಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್.ನಾಗರಾಜ್ ತಿಳಿಸಿದರು.
ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘ 36 ಲಕ್ಷ ರೂ. ನಿಗದಿತ ಠೇವಣಿ ಸಂಗ್ರಹಿಸಿ 14 ಸದಸ್ಯರಿಗೆ 34 ಲಕ್ಷ ರೂ. ಸ್ವಂತ ಬಂಡವಾಳದಿಂದ ಕೆಸಿಸಿ ಸಾಲ ವಿತರಿಸಲಾಗಿದೆ. 5 ಸದಸ್ಯರಿಗೆ 19 ಲಕ್ಷ ರೂ. ವಾಹನ ಸಾಲ ನೀಡಲಾಗಿದೆ. 52 ಸದಸ್ಯರಿಗೆ 24 ಲಕ್ಷ ರೂ. ಮೌಲ್ಯದ ರಸಗೊಬ್ಬರ ಸಾಲ ನೀಡಲಾಗಿದೆ. ಈ ಸಾಲಿನಲ್ಲಿ ಸಂಘದಿಂದ 74 ಲಕ್ಷ ರೂ. ಮೊತ್ತದ ಗೊಬ್ಬರ ವಹಿವಾಟು ಮಾಡಲಾಗಿದೆ. ಸದಸ್ಯರು ಸಂಘದಲ್ಲಿ ದೈನಂದಿನ ವ್ಯವಹಾರ ನಡೆಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷ ಎಂ.ಎಸ್.ಪ್ರಸನ್ನ, ನಿರ್ದೇಶಕರಾದ ಬಿ.ಟಿ.ಶ್ರೀನಾಥ್, ಎಚ್.ವಿ.ವಿನಯ್‌ಕುಮಾರ್, ಬಿ.ಆರ್.ವಿನಯ್‌ಗೌಡ, ಎಚ್.ವಿ.ರಾಘವೇಂದ್ರ, ಬಿ.ಸಿ.ದಿನೇಶ್, ಕೆ.ಮಹಮದ್ ಜಮೀರ್, ಬಿ.ಎಸ್.ಸಾವಿತ್ರಿ, ಕೆ.ಜಿ.ದೀಪ್ತಿ, ರಮೇಶ್, ಬಿ.ಪಿ.ರಂಗನಾಥ್, ಸಿಇಒ ಸಿ.ಎಸ್.ಚಂದ್ರಶೇಖರ್, ಮೇಲ್ವಿಚಾರಕ ನಿತಿನ್ ಪಟೇಲ್ ಇತರರಿದ್ದರು.