

ನರೇಗಲ್ಲ: ಪಟ್ಟಣ ಸೇರಿ ಹೋಬಳಿಯಾದ್ಯಂತ ರೈತರು ಪೂರ್ವ ಮುಂಗಾರಿನ ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ. ಒಂದು ವಾರದಿಂದ ಉತ್ತಮ ಮಳೆಯಾಗಿದ್ದು, ಭೂಮಿ ಉಳುಮೆ ಮಾಡಿ ಬಿತ್ತನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ಮಲ್ಲಾಪೂರ, ದ್ಯಾಂಪೂರ, ಅಬ್ಬಿಗೇರಿ, ಜಕ್ಕಲಿ, ಮಾರನಬಸರಿ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ ಸೇರಿ ಹೋಬಳಿಯಾದ್ಯಂತ ಕೃಷಿಕರು ಜಮೀನುಗಳನ್ನು ಹದಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪೂರ್ವ ಮುಂಗಾರು ಮಳೆ ಪ್ರತಿ ವರ್ಷ ವಾಡಿಕೆಯಷ್ಟು ಬೀಳುತ್ತಿದ್ದರೂ ಮುಂಗಾರು ಮಳೆ ಮಾತ್ರ ರೈತರ ನಿರೀಕ್ಷೆ ಹುಸಿಗೊಳಿಸುತ್ತಿದೆ. ಪ್ರಸಕ್ತ ವರ್ಷ ಪೂರ್ವ ಮುಂಗಾರು ಮಳೆ ರೈತರಲ್ಲಿ ಹಲವು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಕರೊನಾ ಭೀತಿಯ ನಡುವೆಯೇ ರೈತರು ಈಗಾಗಲೇ ಜಮೀನುಗಳನ್ನು ಹದಗೊಳಿಸುತ್ತಿದ್ದಾರೆ. ಒಡ್ಡು, ಒಳಗಟ್ಟಿ ದುರಸ್ತಿಗೊಳಿಸಿ ತಿಪ್ಪೆ ಗೊಬ್ಬರ ಹರಡುತ್ತಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಸಂಗ್ರಹದಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆಗೆ ಸಜ್ಜಾಗುತ್ತಿರುವ ರೈತರಿಗೆ ನೆರವಾಗಲು ಕೃಷಿ ಇಲಾಖೆ ಕೂಡ ಸಿದ್ಧವಾಗಿದೆ.
ಲಾವಣಿ ದರ ದ್ವಿಗುಣ: ಕಳೆದ ವರ್ಷದಲ್ಲಿ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆ ಉಳ್ಳಾಗಡ್ಡಿಗೆ ಬಂಗಾರದ ಬೆಲೆ ಬಂದಿತ್ತು. ಪ್ರತಿ ಕ್ವಿಂಟಾಲ್ ಉಳ್ಳಾಗಡ್ಡಿ ದರ 20 ಸಾವಿರ ರೂ. ಗಡಿ ದಾಟಿತ್ತು. ಇದರ ಪರಿಣಾಮವಾಗಿ ಪ್ರಸಕ್ತ ಸಾಲಿನಲ್ಲಿ ಜಮೀನುಗಳ ಲಾವಣಿ (ಲೀಸ್) ದರ ದ್ವಿಗುಣಗೊಂಡಿದೆ. ಕಳೆದ ವರ್ಷ ಎಕರೆಗೆ 3-4 ಸಾವಿರ ರೂ.ವರೆಗೆ ಇದ್ದ ಲಾವಣಿ ಮೊತ್ತವು ಈ ಬಾರಿ 5-10 ಸಾವಿರ ರೂ.ಗೆ ತಲುಪಿದೆ.
ಬಿತ್ತನೆ ಗುರಿ: ನರೇಗಲ್ಲ ಹೋಬಳಿಯ 44820 ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 9514 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 384 ಹೆಕ್ಟೇರ್ ತೊಗರಿ, 4869 ಹೆಕ್ಟೇರ್ ಗೊವಿನಜೋಳ, 182 ಹೆಕ್ಟೇರ್ ಸಜ್ಜೆ, 103 ಹೆಕ್ಟೇರ್ ಸೂರ್ಯಕಾಂತಿ, 294 ಹೆಕ್ಟೇರ್ ಬಿ.ಟಿ ಹತ್ತಿ, 2200 ಹೆಕ್ಟೇರ್ ಶೇಂಗಾ, 3000 ಹೆಕ್ಟೇರ್ ಉಳ್ಳಾಗಡ್ಡಿ ಬಿತ್ತನೆ ಗುರಿ ಹೊಂದಲಾಗಿದೆ.
ಕೊಟ್ಟಿಗೆ ಗೊಬ್ಬರದ ದರ ದುಪ್ಪಟ್ಟು: ವರ್ಷದಿಂದ ವರ್ಷಕ್ಕೆ ಕೊಟ್ಟಿಗೆ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗುತ್ತಿದ. ಈಗ ದರ ಕೂಡ ದುಪ್ಪಟ್ಟಾಗುತ್ತಿದೆ. ಕಳೆದ ವರ್ಷ ಪ್ರತಿ ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರಕ್ಕೆ 2-3 ಸಾವಿರ ರೂ. ಇದ್ದರೆ, ಈ ಬಾರಿ 5-6 ಸಾವಿರ ರೂ.ಗೆ ತಲುಪಿದೆ. ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಭೂಮಿ ಫಲವತ್ತಾಗುತ್ತದೆ. ಬೆಳೆಗಳಿಗೆ ರೋಗ, ಕೀಟ ಬಾಧೆಗಳು ಕಡಿಮೆ ಎಂಬ ಕಾರಣಕ್ಕೆ ಇದರ ಬಳಕೆಗೆ ರೈತರು ಮುಂದಾಗುತ್ತಿದ್ದಾರೆ.
ಪ್ರಸಕ್ತ ಸಾಲಿನ ಬೇಡಿಕೆಗೆ ಅನುಗುಣವಾಗಿ ಮುಂಗಾರಿನ ಬಿತ್ತನೆ ಬೀಜ, ರಸಗೊಬ್ಬರದ ದಾಸ್ತಾನು ಮಾಡಿಕೊಳ್ಳಲಾಗಿದೆ. ರೈತರ ಅನುಕೂಲಕ್ಕೆ ನರೇಗಲ್ಲ ಸೇರಿ ಹೋಬಳಿಯ ವಿವಿಧೆಡೆ ಸಬ್ಸಿಡಿ ಬಿತ್ತನೆ ಬೀಜ ಮಾರಾಟ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ರೈತರಿಗೆ ಬಿತ್ತನೆ ಕ್ರಮ, ಬೆಳೆ ಆಯ್ಕೆಯ ಬಗ್ಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಸಂಪೂರ್ಣ ಮಾಹಿತಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. | ಜಗದೀಶ ಹಾದಿಮನಿ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ನರೇಗಲ್ಲ