

ಜಗಳೂರು: ತಾಲೂಕಿನ ಕಟ್ಟಿಗೆಹಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಬೀಜಗಳನ್ನು ಹಂದಿಗಳು ರಾತ್ರೋರಾತ್ರಿ ತಿಂದು, ಜಮೀನುಗಳನ್ನು ಹಾಳು ಮಾಡುತ್ತಿವೆ.
ರಾತ್ರೋರಾತ್ರಿ ಹೊಲಗಳಿಗೆ ದಾಂಗುಡಿ ಹಿಡುವ ಹಂದಿಗಳ ಗುಂಪು ಇಡೀ ಜಮೀನು ಸುತ್ತಿ ಮಣ್ಣನ್ನು ಕೆದಕಿ ಮೊಳಕೆ ಹೊಡೆಯುವ ಹಂತದಲ್ಲಿರುವ ಬೀಜಗಳನ್ನು ತಿನ್ನುತ್ತಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಾಲೂಕಿನಾದ್ಯಂತ ಪ್ರತಿ ವರ್ಷ 57 ಸಾವಿರ ಹೆಕ್ಟೇರ್ ಬಿತ್ತನೆ ಆಗುತ್ತಿದ್ದು, ಈ ಬಾರಿ ಜುಲೈ ತಿಂಗಳು ಬಂದರೂ ಇನ್ನು 34 ಸಾವಿರ ಹೆಕ್ಟೇರ್ ಬಿತ್ತನೆ ಬಾಕಿ ಇದೆ. ಇದರ ಮಧ್ಯೆ ಬಿತ್ತಿದ ಜಮೀನುಗಳಿಗೆ ಹಂದಿಗಳು ರಾತ್ರೋರಾತ್ರಿ ನುಗ್ಗುತ್ತಿರುವುದು ರೈತರಿಗೆ ದೊಡ್ಡ ತಲೆನೋವಾಗಿದೆ.
ಹಂದಿಗಳ ಉಪಟಳ ನಿಯಂತ್ರಣಕ್ಕೆ ರೈತರು ಸಾಕಷ್ಟು ಮಾರ್ಗೋಪಾಯ ಮಾಡಿದರೂ ಹಂದಿಗಳ ಹಾವಳಿ ನಿಂತಿಲ್ಲ.