

ಕೋಲಾರ: ಆಲೂಗಡ್ಡೆ ಬಿತ್ತನೆ ಬೀಜದ ಬೆಲೆಯನ್ನು ಹಾಸನ ಜಿಲ್ಲೆಯ ಮಾದರಿಯಂತೆ ಕೋಲಾರದಲ್ಲೂ ನಿಗದಿಪಡಿಸಬೇಕೆಂದು ಕರವೇ ಕಾರ್ಯಕರ್ತರು ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಶಿವರಾಜಗೌಡ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಆಲೂಗಡ್ಡೆ ಬಿತ್ತನೆ ಬೀಜ ಏಜೆಂಟರು 100 ಕೆಜಿ ಬಿತ್ತನೆ ಚೀಲಕ್ಕೆ 5,000ರಿಂದ 6000 ರೂಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಹಾಸನದಲ್ಲಿ ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಲ್ಲಿ ಪ್ರತಿವರ್ಷ ಬಿತ್ತನೆ ಆಲೂಗಡ್ಡೆ ಬೀಜ ಮಾರಾಟದ ಏಜೆಂಟರನ್ನು ಕರೆಸಿ ರೈತರ ಸಮ್ಮುಖದಲ್ಲಿ ಚರ್ಚಿಸಿ ಬಿತ್ತನೆ ಚೀಲಕ್ಕೆ 2,000 ರಿಂದ 2200 ರೂ. ನಿಗದಿಪಡಿಸಿ ಮೇಲ್ಪಟ್ಟು ಮಾರಾಟ ಮಾಡದಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಲಾಗುತ್ತದೆ. ಇದೇ ಮಾದರಿಯನ್ನು ಜಿಲ್ಲೆಯಲ್ಲೂ ಅನುಸರಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಚಂಬೆ ರಾಜೇಶ್ ಮಾತನಾಡಿ, ಜಿಲ್ಲೆಯಲ್ಲಿ ಆಲೂ ಬಿತ್ತನೆ ಬೀಜ ಮಾರಾಟಗಾರರು ರೈತರಿಗೆ ರಿಸೀದಿ ನೀಡುವುದಿಲ್ಲ. ಯಾವ ಕಂಪನಿಯದ್ದೆಂಬ ಮಾಹಿತಿಯೂ ಇರುವುದಿಲ್ಲ. ಕಳಪೆ ಬಿತ್ತನೆ ಬೀಜದಿಂದ ಇಳುವರಿ ಬರದೆ ನಷ್ಟ ಅನುಭವಿಸುವ ರೈತರಿಗೆ ನಷ್ಟ ಪರಿಹಾರ, ವಿಮೆ ಸೌಲಭ್ಯವೂ ಸಿಗುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಕಚೇರಿ ಸಿಬ್ಬಂದಿ ಮನವಿ ಸ್ವೀಕರಿಸಿದರು. ರೈತ ಘಟಕ ಜಿಲ್ಲಾಧ್ಯಕ್ಷ ದಂಡಿಗಾನಹಳ್ಳಿ ಅಂಬರೀಷ್, ಉಪಾಧ್ಯಕ್ಷ ಅರಿನಾಗನಹಳ್ಳಿ ರಮೇಶ್ ವಿ., ಗೌರವಾಧ್ಯಕ್ಷ ಶಾಂತಿಸಾಗರ್ ಮರೇಗೌಡ, ಪ್ರಧಾನ ಕಾರ್ಯದರ್ಶಿ ಅರಿನಾಗನಹಳ್ಳಿ ಹರೀಶ್, ಕಾರ್ಯಾಧ್ಯಕ್ಷ ಮತ್ತಿಕುಂಟೆ ಶ್ರೀನಿವಾಸಗೌಡ, ಉಪಾಧ್ಯಕ್ಷ ಮಂಗಸಂದ್ರ ನಾಗೇಶ್, ಪದಾಧಿಕಾರಿಗಳಾದ ಬಿ.ಕೆ. ರಮೇಶ್‌ಬಾಬು, ಗೌರಿಪೇಟೆ ಲೋಕೇಶ್, ಎಂ.ಆರ್.ಎಸ್.ಮಂಗಸಂದ್ರ ರಮೇಶ್, ಎಸ್.ಎಂ.ಎಸ್.ಸಂತೋಷ್‌ಕುಮಾರ್ ಇತರರಿದ್ದರು.