

ಚಾಮರಾಜನಗರ: ರೈತರಲ್ಲಿ ದೇಸಿ ಬಿತ್ತನೆ ಬೀಜಗಳ ಕುರಿತು ಇದ್ದ ಮೂಲ ಜ್ಞಾನ ಅಳಿಸಿಹೋಗುತ್ತಿದೆ ಎಂದು ಬಿತ್ತನೆ ಬೀಜ ಸಂರಕ್ಷಕ ಹೊಸಮಾಲಂಗಿ ರೇಚಣ್ಣ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಹೆಗ್ಗೋಠಾರ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದ ಮುಂಭಾಗ ಇನ್ಸ್ಟಿಟ್ಯೂಟ್ ಾರ್ ಕಲ್ಚರಲ್ ರಿಸರ್ಚ್ ಅಂಡ್ ಆ್ಯಕ್ಷನ್ (ಇಕ್ರಾ), ಮೈಸೂರು-ಚಾಮರಾಜನಗರ ಜಿಲ್ಲಾ ಸುಸ್ಥಿರ ಸಾವಯವ ಕೃಷಿಕರ ಒಕ್ಕೂಟ ಆಯೋಜಿಸಿದ್ದ ಬೀಜ ಮೇಳದಲ್ಲಿ ಅವರು ಮಾತನಾಡಿದರು. ಒಂದು ಸಂದರ್ಭದಲ್ಲಿ ಹೆಗ್ಗೋಠಾರ ಗ್ರಾಮದಲ್ಲಿ 300-400 ದೇಸಿ ತಳಿಯ ಬೀಜಗಳಿದ್ದವು. ಆದರೆ ಈಗ ಇಲ್ಲ. ತಾಯಂದಿರು ಬೀಜ ಸಂರಕ್ಷಣೆ ಮಾಡುತ್ತಿದ್ದರು. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೀಜಗಳ ಬಗ್ಗೆ ಜ್ಞಾನವಿತ್ತು. ಆದರೆ ಈಗ ಎಲ್ಲೆಡೆ ಬೀಜಗಳ ಕುರಿತ ಮೂಲ ಜ್ಞಾನ ಅಳಿಸಿ ಹೋಗುತ್ತಿದೆ ಎಂದರು.
ಮೆಕಾಲೆ ಶಿಕ್ಷಣ ಭಾರತೀಯರನ್ನು ಪರವಲಂಬಿಗಳನ್ನಾಗಿ ಮಾಡಿತು. ಬ್ಯಾಂಕ್‌ಗಳ ಸಾಲ ನೀತಿಯಿಂದಲೂ ದೇಸಿ ಬೀಜಗಳ ನಾಶವಾಯಿತು. ಕ್ರಿಮಿನಾಶಗಳ ಬಳಕೆ ಕೃಷಿ ವಿಧಾನವನ್ನು ಹಾಳು ಮಾಡಿತು. ವಿಜ್ಞಾನಿಗಳ ಕಂಪನಿಗಳ ಗುಲಾಮರಾಗಿ ದೇಸಿ ತಳಿಯನ್ನು ನಾಶ ಮಾಡಿದರು. ನಾವು ಇರುವ ಸಂಪತ್ತನ್ನು ನಾಶ ಮಾಡಿಕೊಳ್ಳುತ್ತಿದ್ದೇವೆ. ಭೂಮಿಯಲ್ಲಿ ಏನನ್ನೂ ಬೆಳೆಯದೆ ಇರುವುದೂ ಕೂಡ ಭ್ರಷ್ಟಾಚಾರ. ಮೂಲ ತಳಿಗಳನ್ನು ಉಳಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೇಲಾಜಿಪುರದ ಬಸವನುಭವ ಮಂಟಪದ ಶಿವಕುಮಾರಸ್ವಾಮೀಜಿ ಮಾತನಾಡಿ, ಕೃಷಿ ಕಾಯಕವ ಮಾಡುವವರ ಮನೆಯ ಹೊಕ್ಕ ಗುರುವೇ ಪಾವನವಯ್ಯ ಎಂದು ಬಸವಣ್ಣ ಹೇಳುತ್ತಾರೆ. ಆದರೆ ಇಂದು ರೈತರನ್ನು ಕೀಳಾಗಿ ನೋಡುವ ದುಸ್ಥಿತಿ ಬಂದಿದೆ. ಜೀವನಕ್ಕೆ ಆರೋಗ್ಯ ಮತ್ತು ಹಣ ಅಗತ್ಯ. ಆದರೆ ಕೋವಿಡ್ ಸಂದರ್ಭದಲ್ಲಿ ಹಣವಿದ್ದರೂ ಆರೋಗ್ಯ ಸಿಗಲಿಲ್ಲ. ರಾಸಾಯನಿಕ ಬಳಕೆ, ಬಿತ್ತನೆ ಬೀಜದಿಂದ ಆರೋಗ್ಯ ಹಾಳಾಗುತ್ತದೆ. ಬಿತ್ತನೆ ಬೀಜದಲ್ಲಿಯೇ ರೋಗ ಇರುತ್ತದೆ. ಇದನ್ನು ಸರಿಪಡಿಸಲು ಔಷಧಿ ಹಾಕಬೇಕು. ಇದು ರೈತನನ್ನು ಪರವಲಂಬಿಯನ್ನಾಗಿ ಮಾಡುವ ತಂತ್ರವಾಗಿದೆ ಎಂದು ತಿಳಿಸಿದರು.
ಗ್ರಾಮದ ಗೌಡಿಕೆ ಮಾದಪ್ಪ ಮಾತನಾಡಿ, ಇಕ್ರಾ ಸಂಸ್ಥೆಯ ಕಾರ್ಯಕರ್ತ ಶಿವಲಿಂಗೇಗೌಡ ಬೀಜ ಸಂರಕ್ಷಣೆಯ ಅರಿವು ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜನೆ ಮಾಡಿದ್ದಾರೆ. ಇದಕ್ಕಾಗಿ ತುಂಬಾ ಶ್ರಮ ವಹಿಸಿದ್ದಾರೆ. ನಿಜ ಕೃಷಿಯ ಮಹತ್ವವನ್ನು ತಿಳಿಸಿಕೊಡುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರೈತರೊಂದಿಗೆ ಬೀಜ ಸಂರಕ್ಷಕ ಹೊಸಮಾಲಂಗಿ ರೇಚಣ್ಣ ಸಂವಾದ ನಡೆಸಿದರು. ದೇಸಿ ಬೀಜಗಳ ಪ್ರದರ್ಶನದಲ್ಲಿ ರೈತರು ಪಾಲ್ಗೊಂಡರು. ಇಕ್ರಾ ಸಂಸ್ಥೆಯ ಕಾರ್ಯಕರ್ತ ಶಿವಲಿಂಗೇಗೌಡರ ಪುತ್ರಿ ಚೈತ್ರಾ ಧಾನ್ಯಗಳ ರಂಗೋಲಿ ಬಿಡಿಸಿ ಗಮನ ಸೆಳೆದಳು. ಶಿವಲಿಂಗೇಗೌಡ, ಚಿನ್ನಸ್ವಾಮಿ, ಬಾಗಲಕೋಟೆ ಬಸಪ್ಪ, ರೈತ ಮುಖಂಡ ಹೆಗ್ಗೋಠಾರ ವಿಜಯ್‌ಕುಮಾರ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ಹೆಗ್ಗೋಠಾರದ ರೈತರು ಮುಂದಿನ 2-3 ವರ್ಷಗಳಲ್ಲಿ ಹಳ್ಳಿಯನ್ನು ವಿಷ ಮುಕ್ತ ಗ್ರಾಮ ಮಾಡಿ. 2 ವರ್ಷ ಶ್ರಮ ಪಟ್ಟರೆ ರಾಸಾಯನಿಕ ಮುಕ್ತ ಗ್ರಾಮ ಮಾಡಬಹುದು. ತಕ್ಷಣ ಆದಾಯ ಬರಬೇಕೆಂದು ತಾಳ್ಮೆ ಇಲ್ಲದೆ ರಾಸಾಯನಿಕ ಬಳಕೆ ಮಾಡಲಾಗುತ್ತಿದೆ. ಇಂದು ರೈತರು ಬೆಳೆದ ಭತ್ತವನ್ನು ಮಾರಾಟ ಮಾಡಿ ಅಕ್ಕಿ ಖರೀದಿಸಿ ತರುವ ದುಸ್ಥಿತಿ ಬಂದಿದೆ. ಮೂಲ ತಳಿಯ ಸಂರಕ್ಷಣೆ ಮಾಡಬೇಕು. ಅತಿಯಾದ ದುಂದುವೆಚ್ಚ ಮಾಡಬಾರದು. ಕೃಷಿಗೆ ಕೂಲಿಕಾರರ ಕೊರತೆ ಕಾಡುತ್ತಿದೆ. ರೈತರ ಬೆಳೆಗಳಿಗೆ ಬೆಲೆ ನಿಗದಿಯಾಗಬೇಕು.
ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ಶ್ರೀಮುರುಘರಾಜೇಂದ್ರ ಮಹಾಸಂಸ್ಥಾನ ಮಠ, ಮರಿಯಾಲ