

ಬೀದರ್: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರಿಗೆ ಅಗತ್ಯಕಿಂತ ಹೆಚ್ಚಿನ ಬಿತ್ತನೆ ಬೀಜ ಲಭ್ಯವಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಹೇಳಿದರು.
ತಾಲೂಕಿನ ಚಿಲ್ಲರ್ಗಿ ಗ್ರಾಮದಲ್ಲಿ ಹಮ್ಮಿಕೊಂಡಿದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೈತರು ಸಮೀಪದ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿ ಬೀಜಗಳನ್ನು ಪಡೆಯಬಹುದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರು ಸರ್ಕಾರ ಕೇಳಿರುವ ದಾಖಲೆಗಳನ್ನು ನೀಡಿ ಸಬ್ಸಿಡಿ ದರದಲ್ಲಿ ಪಡೆಯಬಹುದು. ಸಾಮಾನ್ಯ ವರ್ಗದ ರೈತರಿಗೂ ಸಬ್ಸಿಡಿ ನೀಡಲಾಗಿದೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಜೈರಾಜ ಮಾತನಾಡಿ, ಸರ್ಕಾರದ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಹಾಗೂ ಸಹಕಾರ ಅಗತ್ಯವಿದೆ. ರೈತರು ತಾಳ್ಮೆಯಿಂದ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಸರತಿಯಲ್ಲಿ ನಿಂತು ಬೀಜಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಆತ್ಮ ಯೋಜನೆಯ ತಾಲೂಕ ವ್ಯವಸ್ಥಾಪಕ ಸತೀಶ ಶೆಟಗಾರ್ ಮಾತನಾಡಿ, ಮುಂಗಾರು ಮಳೆ ಪ್ರವೇಶಕ್ಕೆ ತಡವಾಗಿದ್ದು, ರೈತರು ಆತಂಕಪಡಬೇಡಿ. ಹವಮಾನ ಇಲಾಖೆ ತಿಳಿಸಿರುವಂತೆ ಈ ತಿಂಗಳ ಎರಡನೇ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಮಳೆ ಬಂದ ನಂತರ ಬಿತ್ತನೆ ಪ್ರಕ್ರಿಯೆ ಆರಂಭಿಸುವಂತೆ ತಿಳಿಸಿದರು.
ರೈತ ಸಂಪರ್ಕ ಕೇಂದ್ರ ಅಕಾರಿ ರಾಜಕುಮಾರ ಎಖೇಳಿ, ಗ್ರಾಪಂ ಸದಸ್ಯ ವಿಲ್ಸನ್, ಶೌಕತ್ ಅಲಿ, ಸಂತೋಷ, ಬಸವರಾಜ ಟೋಳೆ, ಮಹಾನಂದ, ವೀರಗೊಂಡ ಇತರರಿದ್ದರು.